ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿರುವುದು ಸಂತಸಕರ. ಆದರೆ ಹಿಂದೆ ಘೋಷಿಸಿದ್ದ 1,610 ಕೋಟಿ ರೂ. ಮೊತ್ತ ಯಾರಿಗಾದರೂ ತಲುಪಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರ ಕೊರೊನಾ ಆರ್ಥಿಕ ಪ್ಯಾಕೇಜ್ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, ಹಿಂದೆ ಘೋಷಿಸಿದ್ದ ಪ್ಯಾಕೇಜ್ನಲ್ಲಿ ಒಂದು ರೂಪಾಯಿ, ಒಬ್ಬರನ್ನು ತಲುಪಿದೆ ಎನ್ನುವುದನ್ನು ನಾನು ಎಲ್ಲಿಯೂ ಕೇಳಿಲ್ಲ. ಕೆಲವರ ಜನ್ಧನ್ ಖಾತೆಗೆ 1,000-2,000 ಮೊತ್ತವನ್ನು ಹಾಕಿದ್ದು ಬಿಟ್ಟರೆ, ಮತ್ಯಾವುದನ್ನೂ ಕಂಡಿಲ್ಲ. ಸಿಎಂ ಯಡಿಯೂರಪ್ಪ ಅವರು ಕೂಡ ಹಣ ಕೊಟ್ಟಿದ್ದನ್ನು ನೋಡಿಲ್ಲ. ಅವರು ಜನರಿಗೆ ನೀಡಿದ ಮಾತನ್ನು ಮೊದಲು ಈಡೇರಿಸಲಿ ಎಂದರು.
ಭಾವನಾತ್ಮಕವಾಗಿ ಮಾತನಾಡಿಕೊಂಡು ದೇಶವನ್ನು, ರಾಜ್ಯವನ್ನು ಮುನ್ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ. ಜನರ ಬದುಕನ್ನು ಅಭಿವೃದ್ಧಿಯತ್ತ ತರುವ ಕಾರ್ಯರೂಪಕ್ಕೆ ಪ್ರಯತ್ನಿಸಬೇಕಿದೆ. ದೇಶದ ವಿವಿಧ ರಾಜ್ಯಗಳಲ್ಲಿರುವ ಕನ್ನಡಿಗರನ್ನು ನಾಡಿಗೆ ಕರೆ ತರಲು ರೈಲು ಪ್ರಯಾಣ ದರ ಭರಿಸಲು, ಯಡಿಯೂರಪ್ಪ ಅವರಿಗೆ ಏನಾಗಿದೆ? ಹೊರಗಿನಿಂದ ಇಲ್ಲಿಗೆ ಕಾರ್ಮಿಕರನ್ನು ಕರೆಸಿಕೊಳ್ಳುವುದಕ್ಕೆ ಯಾವುದೇ ಸರಿಯಾದ ವ್ಯವಸ್ಥೆ ಇದುವರೆಗೂ ಆಗಿಲ್ಲ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್ನಲ್ಲಿ ರಾಜ್ಯಕ್ಕೆ ಎಷ್ಟು ಪಾಲು ಸಿಗಲಿದೆ. ಯಾರಿಗೆ ಎಷ್ಟು ಲಭಿಸಲಿದೆ ಎನ್ನುವುದನ್ನು ನೋಡಿದ ನಂತರ ಈ ಬಗ್ಗೆ ಮಾತನಾಡುತ್ತೇನೆ. ವಿದ್ಯುತ್ ಬಿಲ್ ಕೂಡ ಹೆಚ್ಚು ಬಂದಿರುವ ಬಗ್ಗೆ ದೂರುಗಳು ಇವೆ. ನನ್ನ ಮನೆಯ ಬಿಲ್ ಕೂಡ ತರಿಸಿಕೊಂಡಿದ್ದೇನೆ. ಅಧಿಕಾರಿಗಳ ಜತೆ ಸಮಾಲೋಚಿಸಿದ್ದು, ಮಾಹಿತಿ ಸಿಕ್ಕ ನಂತರ ಸಂಬಂಧಿಸಿದವರನ್ನು ವಿಚಾರಿಸುತ್ತೇನೆ. ಹೆಸ್ಕಾಂಗಳು ನಡೆದುಕೊಳ್ಳುತ್ತಿರುವ ರೀತಿ, ಸರ್ಕಾರದ ಆದೇಶ ಬೇರೆ ಬೇರೆಯಾಗಿದೆ. ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದು ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.