ಬೆಂಗಳೂರು: ಮುಂದಿನ ತಿಂಗಳು ಕಾಂಗ್ರೆಸ್ ಹಮ್ಮಿಕೊಂಡಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳ ರೂಪುರೇಷೆ ನಿರ್ಣಯಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಮಹತ್ವದ ಸಭೆ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಿವಕುಮಾರ್ ಜತೆ ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಧ್ರುವನಾರಾಯಣ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವರಾದ ಕೆ ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಸಂಸದ ಡಿ.ಕೆ. ಸುರೇಶ್, ರಾಜ್ಯಸಭೆ ಸದಸ್ಯರಾದ ಎಲ್ ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
ಆಗಸ್ಟ್ 15 ರಂದು ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಂದಿಷ್ಟು ದೂರ ಪಾದಯಾತ್ರೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯವನ್ನು ಜನರಿಗೆ ತಿಳಿಸಬೇಕು. ಇದರ ಜೊತೆ ಜೊತೆಗೆ ಯುಪಿಎ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ನಡೆಗಳನ್ನ ವಿವರಿಸಬೇಕು ಎಂಬ ಸೂಚನೆಯನ್ನು ನೀಡಿದರು.
![dkshiva-kumar-meeting-for-the-outline-of-the-independence-amrit-mahotsava-programs](https://etvbharatimages.akamaized.net/etvbharat/prod-images/15816769_thumbn.jpg)
ವಿಷನ್ ಕಮಿಟಿ ಭೇಟಿ : ಕೆಪಿಸಿಸಿ ವಿಷನ್ ಕರ್ನಾಟಕ ಸಮಿತಿಯ ಅಧ್ಯಕ್ಷರೂ ಆದ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಸಂಚಾಲಕ ರಾಜೀವ್ ಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಮಿತಿಯ ವರದಿಯನ್ನು ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸಲ್ಲಿಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ತುರುವೇಕೆರೆ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ತುಮಕೂರು ಜಿಲ್ಲೆ ಕಾಂಗ್ರೆಸ್ ಮುಖಂಡರ ಜತೆ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸಮಾಲೋಚನೆ ನಡೆಸಿದರು. ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅರ್. ರಾಮಕೃಷ್ಣ, ಚೌಧರಿ ರಂಗಪ್ಪ, ಬೆಮೆಲ್ ಕಾಂತರಾಜ್, ರಾಜಣ್ಣ, ಗೀತಾ ರಾಜಣ್ಣ, ಮುರಳಿದರ್ ಹಾಲಪ್ಪ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿಧಾನಪರಿಷತ್ ಸಚೇತಕರಾಗಿದ್ದ ಮಾಜಿ ಎಂಎಲ್ಸಿ ಎಂ ನಾರಾಯಣಸ್ವಾಮಿಗೆ ಡಿಕೆಶಿ ಹೊಸ ಜವಾಬ್ದಾರಿ ವಹಿಸಿದರು. ಕೆಪಿಸಿಸಿ ಉಪಾಧ್ಯಕ್ಷರಾಗಿ ಈಗಾಗಲೇ ತಮ್ಮನ್ನು ಪಕ್ಷದ ಕಾರ್ಯಕ್ರಮಗಳು, ಸಭೆಗಳು ಮತ್ತು ಕಂಟ್ರೋಲ್ ರೂಂ ಉಸ್ತುವಾರಿಯನ್ನಾಗಿ ಜವಾಬ್ದಾರಿಯನ್ನು ನೀಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಇವರೊಂದಿಗೆ ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯನ್ನಾಗಿ ಈ ಮೂಲಕ ನೇಮಕ ಮಾಡಲಾಗಿದೆ.
ದಿಲ್ಲಿಗೆ ಪ್ರಯಾಣ : ಈ ಎಲ್ಲಾ ಸಭೆಗಳನ್ನು ಪೂರೈಸಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದಿಲ್ಲಿಗೆ ಇಂದು ರಾತ್ರಿ ಪ್ರಯಾಣ ಬೆಳೆಸಿದ್ದಾರೆ. ನಾಳೆ ದಿಲ್ಲಿಯಲ್ಲಿ ಎಐಸಿಸಿ ನಾಯಕರ ಜೊತೆ ಇವರು ಸಭೆ ನಡೆಸಲಿದ್ದಾರೆ. ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಈಗಾಗಲೇ ದಿಲ್ಲಿಯಲ್ಲಿಯೇ ತಂಗಿದ್ದು, ನಾಳಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ವಿವಿಧ ವಿಚಾರಗಳ ಜೊತೆ ರಾಷ್ಟ್ರೀಯ ನಾಯಕರ ಜೊತೆ ಅವರು ಇದೇ ಸಂದರ್ಭ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಓದಿ :ಹೆಚ್ಡಿಕೆ ಸಿಎಂ ಆಗುತ್ತಾರೆ, ಜೆ.ಕೆ. ಕೃಷ್ಣಾರೆಡ್ಡಿ ಮಂತ್ರಿ ಆಗೋದು ಖಚಿತ: ಸಿಎಂ ಇಬ್ರಾಹಿಂ ಭವಿಷ್ಯ