ಬೆಂಗಳೂರು: ಗಲಭೆ ಪ್ರಕರಣಕ್ಕೆ ಬಿಜೆಪಿಯವರು ತುಪ್ಪ ಸುರಿಯುವ ಪ್ರಯತ್ನ ಮಾಡುತ್ತಿದ್ದಾರೆ ಹೊರತು, ನೀರು ಹಾಕುವ ಕೆಲಸ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಕಿಡಿಗೇಡಿಗಳಿಂದ ಬೆಂಕಿಗಾಹುತಿಯಾಗಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಭೇಟಿ ನೀಡಿ ಮಾತನಾಡಿ, ನಿನ್ನೆ ನಡೆದ ಘಟನೆ ಬಗ್ಗೆ ವಿಷಾದವಿದೆ. ಅವಹೇಳನಕಾರಿ ಪೋಸ್ಟ್ ಹಾಕಿದ ನವೀನ್ ಎಂಬಾತನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಇದರಿಂದ ಕೆರಳಿದ ಜನರು, ಕಾನೂನು ಕೈಗೆತ್ತಿಕೊಂಡಿದ್ದಾರೆ. ಎರಡು ಕಡೆಯವರಿಂದಲೂ ತಪ್ಪಾಗಿದೆ. ಘಟನೆ ಪ್ರತಿಯೊಂದು ಹಂತದಲ್ಲಿಯೂ ಬಿಜೆಪಿ ತುಪ್ಪ ಸುರಿಯುವ ಕೆಲಸ ಮಾಡ್ತ ಇದೆಯೇ ಹೊರತು, ನೀರು ಹಾಕುವ ಕೆಲಸ ಮಾಡುತ್ತಿಲ್ಲ ಎಂದು ಎಂದು ಹೇಳಿದರು.
ಯಾವುದೇ ಪಕ್ಷದ ಶಾಸಕನಿಗೂ ಇಂತಹ ಪರಿಸ್ಥಿತಿ ಬರಬಾರದು. ಇಬ್ಬರ ನಡುವೆ ಜಗಳಕ್ಕೆ ಅಮಾಯಕರು ಬಲಿಯಾಗುವುದು ಎಷ್ಟು ಸರಿ. ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಘಟನೆ ಬಗ್ಗೆ ಆಂತರಿಕ ತನಿಖೆ ನಡೆಸಲಾಗುವುದು ಎಂದರು.