ಬೆಂಗಳೂರು: ಕಾಂಗ್ರೆಸ್ ಪ್ರಚಾರ ಇಲ್ಲಿಂದ ಆರಂಭವಾಗಿದ್ದು, ಇದನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ. ಪಾಟೀಲ್ ಅಧಿಕಾರ ಪದಗ್ರಹಣ ಸಮಾರಂಭದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ರಾಜ್ಯವನ್ನು ಜಾತಿ, ಧರ್ಮದ ಹೆಸರಲ್ಲಿ ಒಡೆಯುವ ಯತ್ನ ನಡೆಯುತ್ತಿದೆ ಎಂದು ಹರಿಹಾಯ್ದರು.
ಉಪಚುನಾವಣೆ, ಪರಿಷತ್ ಸ್ಥಾನಗೆದ್ದೆವು. ಇಂತಹ ಸಂದರ್ಭದಲ್ಲಿ ಪಂಚರಾಜ್ಯ ಚುನಾವಣೆ ನಡೆಯಿತು. ಪಂಜಾಬ್ನಲ್ಲಿ ಸೋತಿದ್ದೇವೆ. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಉತ್ತರ ಪ್ರದೇಶ, ಗೋವಾದಲ್ಲಿ ನಮ್ಮ ಬಲ ಹೆಚ್ಚಿದೆ. ಜಾತಿ, ಧರ್ಮದ ಮೇಲೆ ಅಧಿಕಾರ ನಡೆಸಲು ಬಿಜೆಪಿ ಹೊರಟಿದೆ. ರಾಜ್ಯದಲ್ಲಿ 45 ಲಕ್ಷ ಮಂದಿ ಸದಸ್ಯತ್ವ ಮಾಡಿ ದೇಶದಲ್ಲೇ ದೊಡ್ಡ ರಾಜ್ಯವಾಗಿಸಿದ್ದೀರಿ, ಧನ್ಯವಾದಗಳು ಎಂದರು.
ಸದನ ಕಲಾಪದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಈ ರಾಜ್ಯ, ದೇಶದಲ್ಲಿ ಜನರಿಗೆ ಬಿಜೆಪಿ ಸರ್ಕಾರದ ಅಧಿಕಾರ ಸಾಕಾಗಿದೆ. ಎಐಸಿಸಿ ಬೆಲೆ ಏರಿಕೆ ತಡೆಗೆ ವಿನೂತನ ಪ್ರತಿಭಟನೆಗೆ ಕರೆಕೊಟ್ಟಿದೆ. ಇದರಿಂದ ಮಾ.31 ರಂದು ದ್ವಿಚಕ್ರ ವಾಹನಕ್ಕೆ ಹಾರ ಹಾಕಿ, ಜಾಗಟೆ ಬಡಿದು ಪ್ರತಿಭಟಿಸಿ. ದೇಶ, ರಾಜ್ಯದಿಂದ ಈ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದು ಕರೆ ನೀಡಿದರು.
ನಾಗಪುರ ಶಿಕ್ಷಣ ಪದ್ಧತಿ ತರಲು ಬಿಜೆಪಿ ಮುಂದಾಗಿದೆ: ನಾವೆಲ್ಲಾ ಹಿಂದುಗಳಲ್ವಾ? ಈ ರಾಷ್ಟ್ರಧ್ವಜ ನಮ್ಮ ಗೌರವ. ರಾಷ್ಟ್ರಪ್ರೇಮ ನಮ್ಮದು. ಗಾಂಧಿ ಕುಟುಂಬ ಈ ರಾಷ್ಟ್ರಕ್ಕಾಗಿ ಪ್ರಾಣ, ಅಧಿಕಾರ ತ್ಯಾಗ ಮಾಡಿದ್ದಾರೆ. ಆದರೆ ಅವರು ನೀವೇನು ಮಾಡಿದ್ದೀರಿ ಎನ್ನುತ್ತಿದ್ದಾರೆ. ಈಗ ನಾಗಪುರ ಶಿಕ್ಷಣ ಪದ್ಧತಿ ತರಲು ಬಿಜೆಪಿ ಮುಂದಾಗಿದೆ. ನಾವು ಇತಿಹಾಸ ಪುಟ ಸೇರಬೇಕು. ಪಂಚರಾಜ್ಯ ಚುನಾವಣೆ ಫಲಿತಾಂಶದಿಂದ ಹೆದರುವುದು ಬೇಡ. ನಮ್ಮ ಕಾಲ ಮೇಲೆ ನಿಂತು ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಇನಿಯನ ಸಹಾಯದಿಂದ ಹೆತ್ತತಾಯಿ ಕೊಂದ ಕಿರಾತಕಿ : ಪೊಲೀಸರ ಮುಂದೆ ಶಾಕಿಂಗ್ ಹೇಳಿಕೆ!
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಎಂ.ಬಿ. ಪಾಟೀಲ್ ನಮ್ಮ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಧಕ್ಷತೆ, ಪ್ರಾಮಾಣಿಕತೆಯಿಂದ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದರು. ಇಂದು ವಹಿಸಿಕೊಂಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ರಾಜ್ಯದಲ್ಲಿ ಹಿಂಬಾಗಿಲಿನಿಂದ ಬಂದ ಒಂದು ಅನೈತಿಕ ಸರ್ಕಾರ ಇದೆ. 2008, 2018 ರಲ್ಲಿ ಜನ ಭಾರತೀಯ ಜನತಾ ಪಕ್ಷಕ್ಕೆ ಬಹುಮತ ನೀಡಿರಲಿಲ್ಲ. ಸರ್ಕಾರ ಮಾಡಲು ಬೇಕಿದ್ದ ಕನಿಷ್ಠ ಸಂಖ್ಯೆ ಸಿಗಲಿಲ್ಲ. ಕೊಟ್ಯಂತರ ರೂ. ಲಂಚದಿಂದ ಹೊಡೆದಿದ್ದ ಹಣ ಖರ್ಚು ಮಾಡಿ ಯಡಿಯೂರಪ್ಪ 2008 ರಲ್ಲಿ ಅಧಿಕಾರಕ್ಕೆ ಬಂದರು. 2018 ರಲ್ಲೂ ಒಂದು ದಿನ ಸಿಎಂ ಆದರು. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್ ಗೆ ಬೆಂಬಲ ನೀಡಿದ್ದೆವು. ಮತ್ತೆ ಯಡಿಯೂರಪ್ಪ ಕೋಟ್ಯಂತರ ರೂ. ಹಣವನ್ನು ಖರ್ಚು ಮಾಡಿ ನಮ್ಮ 14, ಜೆಡಿಎಸ್ನ 3 ಸದಸ್ಯರನ್ನು ಆಪರೇಷನ್ ಮಾಡಿ ಅನೈತಿಕ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಬಿಎಸ್ವೈ ವಿರುದ್ಧ ವಾಗ್ದಾಳಿ ನಡೆಸಿದರು.
ಮಾನ ಮರ್ಯಾದೆ ಇದ್ದರೆ ಈ ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು: ನರೇಂದ್ರ ಮೋದಿಯವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ, ಈ ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕಿತ್ತು. ಯೋಜನೆಗೆ 100 ರೂ. ಖರ್ಚು ಮಾಡಿದರೆ 75 ರೂ. ಲಂಚ ಪಡೆಯುತ್ತಾರೆ. ನಾನು ದಾಖಲೆ ಸಮೇತ ಮಾತನಾಡುತ್ತಿದ್ದೇನೆ. ಈ ರೀತಿಯಾದರೆ ಒಳ್ಳೆಯ ರಸ್ತೆ, ಬಿಲ್ಡಿಂಗ್, ನೀರಾವರಿ ಯೋಜನೆ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಎಸ್ಸಿ/ಎಸ್ಟಿಗಳಿಗೆ ಅನ್ಯಾಯ ಮಾಡಿದ್ದಾರೆ : ಬಸವರಾಜ ಬೊಮ್ಮಾಯಿ ವಿರುದ್ಧವೂ ಸಿದ್ದರಾಮಯ್ಯ ಹರಿಹಾಯ್ದರು. ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ಒಂದೇ ಒಂದು ಮನೆಯನ್ನು ಬಡವರಿಗೆ ನೀಡಿಲ್ಲ. ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರ ಎರಡು ವರ್ಷದಲ್ಲಿ 8,300 ಕೋಟಿ ಖರ್ಚು ಮಾಡಿದ್ದು, 15 ಸಾವಿರ ಕೋಟಿ ಎನ್ನುತ್ತಿದ್ದಾರೆ. ಎಸ್ಸಿ/ಎಸ್ಟಿಗಳಿಗೆ ಅನ್ಯಾಯ ಮಾಡಿದ್ದಾರೆ. ಜಾತಿ ಧರ್ಮದ ಹೆಸರಲ್ಲಿ ದೇಶ ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಶೋಷಿತ ವರ್ಗದವರನ್ನ ಪ್ರಾಣಿಗಳಂತೆ ನೋಡುತ್ತಿದ್ದರು: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಮಹಾತ್ಮ ಗಾಂಧಿ ಅವರನ್ನ ಕೊಂದ ಸಂಘ ಪರಿವಾರದ ವಿರುದ್ಧ ನಮ್ಮ ಹೋರಾಟ ಇರಬೇಕು. ಸಂವಿಧಾನ ಬರುವ ಮುಂಚೆ ಶೋಷಿತ ವರ್ಗದವರನ್ನ ಪ್ರಾಣಿಗಳಂತೆ ನೋಡುತ್ತಿದ್ದರು. ನೆಹರು, ರಾಜೇಂದ್ರ ಪ್ರಸಾದ್ ಸೇರಿದಂತೆ ಅಂಬೇಡ್ಕರ್ ನೀಡಿದ ಸಂವಿಧಾನ ಬದಲಿಸಲು ಹೊರಟಿದ್ದಾರೆ. ದೇವಸ್ಥಾನದಲ್ಲಿ ಕೇವಲ ಪುರುಷ ಪೂಜಾರಿ, ಮಸೀದಿಯಲ್ಲಿ ಪುರುಷ ಮೌಲ್ವಿ, ಚರ್ಚ್ ನಲ್ಲಿ ಪುರುಷ ಫಾದರ್, ಎಲ್ಲೂ ಮಹಿಳೆಯರನ್ನು ಈ ಸ್ಥಾನದಲ್ಲಿ ನೋಡಕ್ಕೆ ಸಾಧ್ಯವಿಲ್ಲ. ಆದರೆ ಸಂವಿಧಾನ ಪ್ರಕಾರ ಒಬ್ಬ ಮಹಿಳೆ ಪ್ರಧಾನಿ - ರಾಷ್ಟ್ರಪತಿ ಆಗಬಹುದು. ನಮ್ಮ ದೇಶದ ದುರಂತ ಗಡಿಪಾರು ಆಗಿದ್ದ ಅಮಿತ್ ಶಾ ಈಗ ನಮ್ಮ ದೇಶದ ಗೃಹ ಸಚಿವ. ಗುಜರಾತ್ ಧಂಗೆ ಮಾಡಿದವ ದೇಶದ ಪ್ರಧಾನಿ ಎಂದು ವ್ಯಂಗ್ಯವಾಡಿದರು.