ಬೆಂಗಳೂರು: ಬಹಳ ವಿಶ್ವಾಸವಿಟ್ಟು ಜನರು, ಹೈಕಮಾಂಡ್ ಬದಲಾವಣೆ ತರುವ ವಿಶ್ವಾಸದಿಂದ ಬೆಂಗಳೂರು ನಗರಾಭಿವೃದ್ಧಿಯ ಜವಾಬ್ದಾರಿ ನೀಡಿದ್ದಾರೆ. ನಾನು ಗ್ರಾಮೀಣ ಭಾಗದಿಂದ ಬಂದಿದ್ದರೂ ಇಲ್ಲಿನ ಇತಿಹಾಸ, ಅಭಿವೃದ್ಧಿ, ಈ ನಗರದ ಮಹತ್ವ ಅರಿತಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಪಾಲಿಕೆ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಅವರು ಮಾತನಾಡಿದರು.
ನಗರ ಈ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಜನರು ಶ್ರಮವಹಿಸಿದ್ದಾರೆ. ಬೆಂಗಳೂರು ಕಟ್ಟಿದ ಕೆಂಪೇಗೌಡರು, ನಂತರ ಕೆಂಗಲ್ ಹನುಮಂತಯ್ಯ ಸೇರಿದಂತೆ ಅನೇಕ ನಾಯಕರು ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಕಾರ್ಪೊರೇಟರ್ ಗಳು, ಹಲವು ನಾಯಕರು ಸಹ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಒಂದು ಕೋಟಿಗಿಂತ ಹೆಚ್ಚು ಜನರು ಇಲ್ಲಿ ವಾಸ ಮಾಡುತ್ತಾ ಇದ್ದಾರೆ. 40 ರಿಂದ 50 ಲಕ್ಷ ಜನ ಹೊರಗಿನಿಂದ ಬಂದು ಹೋಗುವುದನ್ನು ಮಾಡುತ್ತಾ ಇದ್ದಾರೆ ಎಂದು ಹೇಳಿದರು.
ವಿಶ್ವದ ಅನೇಕ ನಾಯಕರಿಗೆ, ಉದ್ಯಮಿಗಳಿಗೆ ಬೆಂಗಳೂರಿನ ಮೂಲಕ ಭಾರತವನ್ನು ನೋಡುವಂತಾಗಿದೆ. ಹಾಗಾಗಿ ಇಲ್ಲಿ ಹಚ್ಚಿನ ಸೌಲಭ್ಯವನ್ನ ಒದಗಿಸುವ ಕೆಲಸ ಆಗಬೇಕಿದೆ. ಇವತ್ತು ನಾನು ಈ ಸಭೆಯ ಮೂಲಕ ನಗರದ ಅಭಿವೃದ್ಧಿಯ ಕುರಿತು ಪಾಠ ಕಲಿತಿದ್ದೇನೆ. ಬಿಬಿಎಂಪಿ ಬೆಂಗಳೂರಿನ ಅಭಿವೃದ್ಧಿಗಾಗಿ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ತಿಳಿಸಿದರು. ಒಂದೆ ದಿನದಲ್ಲಿ ಎಲ್ಲ ಬದಲಾವಣೆ ತರುತ್ತೇನೆ ಎಂದು ನಾನು ಹೇಳುವುದಿಲ್ಲ. ಮುಖ್ಯವಾಗಿ ನಾನು ಭ್ರಷ್ಟಾಚಾರ ಮುಕ್ತ ಬಿಬಿಎಂಪಿಯಾಗಬೇಕು ಎಂದು ತಿಳಿಸಿದ್ದೇನೆ. ಕಚೇರಿಗೆ ಬರುವ ಸಾರ್ವಜನಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದ್ದೇನೆ ಎಂದರು.
ಡಬಲ್ ಬಿಲ್ಗಳು ಸೇರಿದಂತೆ ಎಲ್ಲ ಬಿಲ್ಗಳು ನಿಲ್ಲಬೇಕು, ಎಲ್ಲ ಅಕ್ರಮಗಳು ನಿಲ್ಲಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಹಣಕಾಸಿನ ವ್ಯವಸ್ಥೆ ನಿರ್ವಹಿಸಲು ಭದ್ರತೆ ತರಬೇಕು ಸರ್ಕಾರದ ಅವಲಂಬನೆ ಬೇಡ. ಈ ಹಿಂದೆ ನರ್ಮ್ ಯೋಜನೆ ಮೂಲಕ ಕೇಂದ್ರದಿಂದ ಹಣಕಾಸಿನ ನೆರವು ನೀಡಲಾಗುತ್ತಿತ್ತು. ಆದರೆ, ಈಗ ಯಾವುದೇ ಸಹಾಯ ಸಿಗುತ್ತಿಲ್ಲ. ಆದಷ್ಟು ಬೇಗ ಪಾಲಿಕೆಯ ಚುನಾವಣೆಯನ್ನು ನಡೆಸುತ್ತೇವೆ. ತೆರಿಗೆ ಹೆಚ್ಚಳದ ಕುರಿತು ವರದಿ ಬಂದಿದೆ, ಅದನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಡಿಲಿಮಿಟೇಶನ್ ಮರುಪರಿಶೀಲನೆಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಾಗುತ್ತದೆ ಎಂದು ಮಾಹಿತಿ ನೀಡಿದರು.
ಮಳೆ ಹೆಚ್ಚಿರುವ ಕಾರಣ ರಸ್ತೆ ಗುಂಡಿಗಳಾಗುವ ಸಾಧ್ಯತೆ ಇದೆ, ರಸ್ತೆಗುಂಡಿಗಳು ಕಾಣಿಸಿಕೊಂಡ ತಕ್ಷಣವೇ ಗುಂಡಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪಾಲಿಕೆಯಲ್ಲಿ ಶೇ 40 ರಷ್ಟು ಕಮಿಷನ್ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಾನು ಗುತ್ತಿಗೆದಾರರ ಜೊತೆ ಚರ್ಚೆ ಮಾಡುತ್ತೇನೆ. ಎಲ್ಲ ವರ್ಗದ ಜನರ ಜತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.