ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಪಕ್ಷದ ಕಚೇರಿಯಲ್ಲಿ ಆರೋಗ್ಯ ಹಸ್ತ ಯೋಜನೆ ಕುರಿತು ಎಲ್ಲ ಜಿಲ್ಲೆಗಳ ಸಮನ್ವಯಕಾರರ ಜತೆ ವಿಡಿಯೋ ಸಂವಾದ ನಡೆಸಿದರು. ರಾಜ್ಯದಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದರ ನಿಯಂತ್ರಣಕ್ಕೆ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಆರಂಭಿಸಿದ್ದು ಇದನ್ನು ವ್ಯವಸ್ಥಿತವಾಗಿ ಜಾರಿಗೆ ತರುವಂತೆ ಸೂಚನೆ ನೀಡಿದರು.
ಯಾವುದೇ ರೀತಿಯಲ್ಲೂ ಆರೋಗ್ಯ ಹಸ್ತ ಕಾರ್ಯನಿರ್ವಹಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಿ. ಅಲ್ಲದೆ ಸಾರ್ವಜನಿಕರಿಗೆ ಇದರ ಮಹತ್ವವನ್ನು ವಿವರಿಸುವ ಕಾರ್ಯ ಮಾಡಿ. ಜೊತೆಜೊತೆಗೆ ಸರ್ಕಾರದ ವೈಫಲ್ಯವನ್ನು ಕೂಡ ಜನರ ಗಮನಕ್ಕೆ ತರುವ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಯೋಜನೆ ಮುಖ್ಯಸ್ಥ, ಮಾಜಿ ಸಂಸದ ಧೃವನಾರಾಯಣ್ ಉಪಸ್ಥಿತರಿದ್ದರು.
ಈ ನಡುವೆ ಹಾಸಿಗೆ ಹೊಲಿಯುವ ವೃತ್ತಿ ಅವಲಂಭಿಸಿರುವ ನದಾಫ್, ಪಿಂಜಾರ, ಮನ್ಸೂರ್, ದೂದೆಖುಲಾ ಸಮಾಜಗಳ ಒಕ್ಕೂಟದ ಆಲ್ ಇಂಡಿಯಾ (ರಿ) ಜಮಿಯತುಲ್ ಮನ್ಸೂರ್ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಿ, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಅಮಾನ್ ಕೂಡಗಲಿ, ಪ್ರಧಾನ ಕಾರ್ಯದರ್ಶಿ ಗೌಸ್ ಪಾಷಾ ಮತ್ತಿತರರು ಹಾಜರಿದ್ದರು. ಮನವಿ ಸ್ವೀಕರಿಸಿದ ಶಿವಕುಮಾರ್ ಒಕ್ಕೂಟದ ಸದಸ್ಯರಿಗೆ ಭರವಸೆ ನೀಡಿದ್ದು, ಎಲ್ಲಾ ವಿಚಾರವನ್ನು ಸರ್ಕಾರದ ಮುಂದಿಟ್ಟು, ಆದಷ್ಟು ಬೇಗ ಸಮಸ್ಯೆ ನಿವಾರಿಸುವಂತೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.