ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ಪ್ರಯತ್ನಗಳು ಆರಂಭವಾಗಿದೆ. ಇದುವರೆಗೂ ಕೋವಿಡ್ ಆತಂಕ ಹಿನ್ನೆಲೆ ಪಕ್ಷ ಸಂಘಟನೆಯತ್ತ ಮುಖ ಮಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಅಧಿಕಾರವಹಿಸಿಕೊಂಡ ಎರಡು ತಿಂಗಳ ಬಳಿಕ ಸಂಘಟನೆಯತ್ತ ಮುಖ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ತಮ್ಮ ನೇತೃತ್ವದಲ್ಲಿ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದಾರೆ.
ಮೇ 19 ರಿಂದ ಮೇ 23 ರವರೆಗೆ ಸರಣಿ ಸಭೆ ನಡೆಯಲಿದೆ. ಮೇ 19 ರಂದು ಬೆಳಗ್ಗೆ 11 ಕ್ಕೆ ವಿಧಾನಸಭಾ ಕ್ಷೇತ್ರಗಳ ವೀಕ್ಷಕರ ಕೆಪಿಸಿಸಿ ಮಾಜಿ ಉಸ್ತುವಾರಿಗಳ ಪದಾಧಿಕಾರಿಗಳ ಸಭೆ, (ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಉಪಸ್ಥಿತಿ.) ಮಧ್ಯಾಹ್ನ 3ಕ್ಕೆ ಕೆಪಿಸಿಸಿ ವತಿಯಿಂದ ನೇಮಕಗೊಂಡ ವಿಧಾನಸಭೆ ಕ್ಷೇತ್ರ ಸಂಯೋಜಕರ ಸಭೆ.
ಮೇ 20ರಂದು ಬೆಳಗ್ಗೆ 11ಕ್ಕೆ 2018ರ ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳ ಸಭೆ ನಡೆದರೆ, ಮಧ್ಯಾಹ್ನ 3ಕ್ಕೆ ರಾಜ್ಯದ ಎಲ್ಲ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು, ಮಾಜಿ ಸಂಸದರು ಮತ್ತು 2019ರ ಲೋಕಸಭೆ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಭೆ ನಡೆಯಲಿದೆ.
ಮೇ 21 ರಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆ ನಡೆದರೆ, ಮಧ್ಯಾಹ್ನ 3ಕ್ಕೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆ ನಡೆಯಲಿದೆ. ಅಂದು ಸಂಜೆ 5ಕ್ಕೆ ರಾಜ್ಯ ಎನ್ಎಸ್ಯುಐ ಅಧ್ಯಕ್ಷರ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆ ಕರೆಯಲಾಗಿದೆ.
ಮೇ 22ರಂದು ಬೆಳಗ್ಗೆ 11ಕ್ಕೆ 2018ಕ್ಕಿಂತ ಹಿಂದಿನ ಮಾಜಿ ಶಾಸಕರು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಜತೆ ಸಭೆ ನಡೆಸಲಿರುವ ಡಿಕೆಶಿ ಮಧ್ಯಾಹ್ನ 3ಕ್ಕೆ ವಿವಿಧ ನಿಗಮ/ಮಂಡಳಿಗಳ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾಡಾ/ನಗರಾಭಿವೃದ್ಧಿ ಮಂಡಳಿಗಳ ಮಾಜಿ ಅಧ್ಯಕ್ಷರ ಸಭೆ ನಡೆಸಿ, ಸಂಜೆ 5ಕ್ಕೆ ಎಲ್ಲ ಘಟಕ, ಸೆಲ್ ಮತ್ತು ಇಂಟಕ್ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರ ಸಭೆ ನಡೆಸಲಿದ್ದಾರೆ
ಮೇ 23ರಂದು ಕೆಪಿಸಿಸಿ ಸದಸ್ಯರ ಸಭೆ (ಮೇಲಿನ ಸಭೆಯಲ್ಲಿ ಭಾಗವಹಿಸದಿರುವವರ) ಸಭೆ ಬೆಳಗ್ಗೆ 11ಕ್ಕೆ ನಡೆಯಲಿದೆ.
ಈಗಾಗಲೇ ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆಯಾಗಲಿದೆ ಎಂಬ ಮಾಹಿತಿ ಲಭಿಸಿರುವ ಹಿನ್ನೆಲೆ ಡಿಕೆಶಿ ಅವಸರ ಅವಸರವಾಗಿ ಸಭೆ ನಿಗದಿಪಡಿಸಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳು ರೆಡ್ ಝೋನ್ ಆಗಿ ಪರಿವರ್ತನೆಗೊಂಡಿರುವ ಸಂದರ್ಭದಲ್ಲಿಯೇ ಸುರಕ್ಷಿತ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ರೀತಿ ಸರಣಿ ಸಭೆ ನಡೆಸಿದರೆ ಅದು ಇನ್ನೊಂದು ಅಪಾಯಕ್ಕೆ ನಾಂದಿಯಾಗಬಹುದು ಎಂಬ ಅನುಮಾನ ಕೂಡ ಕಾಡಿದೆ. ಕಾಂಗ್ರೆಸ್ ಪಕ್ಷ ಇದಕ್ಕೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.