ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಆಡಳಿತ ನೀಡುತ್ತಿವೆ. ಇದರ ವಿರುದ್ಧ ನಾವು ಧ್ವನಿ ಎತ್ತಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಹೋರಾಟ ಮಾಡಬೇಕು. ಇದು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಆಗಬೇಕು. ನಾವು ಹೋರಾಟಕ್ಕೆ ಅವಕಾಶ ಹುಡುಕಬೇಕಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಪರೀತ್ಯಗಳು ನಮಗೆ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟಿವೆ. ಎಲ್ಲ ವರ್ಗದ ಜನ ಬೀದಿಗೆ ಬಂದಿದ್ದಾರೆ. ಬದುಕು ನಡೆಸುವುದು ದುಸ್ತರ ಆಗಿದೆ. ಜನರ ಧ್ವನಿ ಆಗೋಕೆ ನಮಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಇದು ನಮ್ಮ ಪಕ್ಷದ ಸಂಘಟನೆ ಹಾಗೂ ಹೋರಾಟದ ವರ್ಷ. ಆ ನಿಟ್ಟಿನಲ್ಲಿ ನಾವು ಹೋರಾಟ ಮಾಡಬೇಕು. ನಾವು ಈ ಸ್ಥಾನದಲ್ಲಿ ಎಷ್ಟು ದಿನ ಇರುತ್ತೇವೆ ಅನ್ನುವುದು ಮುಖ್ಯವಲ್ಲ. ಪಕ್ಷ ಸಂಘಟನೆ ಹೇಗೆ ಮಾಡ್ತೇವೆ ಅನ್ನುವುದು ಮುಖ್ಯ. ವ್ಯಕ್ತಿ ಪೂಜೆ ಮಾಡುವುದನ್ನು ಬಿಡಬೇಕು. ಪಕ್ಷ ಪೂಜೆ ಮಾಡಿ ಅಧಿಕಾರಕ್ಕೆ ತರೋಣ. ಜನ ನಾನು ಮುಖ್ಯಮಂತ್ರಿ ಆಗಬೇಕು ಅಂತ ಜೈಕಾರ ಹಾಕಿದ್ರು. ಅದು ನನಗೆ ಅವಶ್ಯಕತೆಯಿಲ್ಲ. ಪಕ್ಷ ಅಧಿಕಾರಕ್ಕೆ ಬರುವುದೇ ನನಗೆ ಮುಖ್ಯ ಎಂದು ಪರೋಕ್ಷವಾಗಿ ತಾನು ಸಿಎಂ ಆಕಾಂಕ್ಷಿ ಅಂತ ಸಾರಿದರು.
ಇವತ್ತು ಶುಭದಿನ ಮತ್ತು ಪವಿತ್ರ ದಿನ. ನಮ್ಮ ಹಿರಿಯ ನಾಯಕರಿಗೆ ಪದಗ್ರಹಣ ಕಾರ್ಯಕ್ರಮ. ರಾಮಲಿಂಗರೆಡ್ಡಿ ಬಿಬಿಎಂಪಿ ಸದಸ್ಯರಾಗಿ, ಬಳಿಕ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ಈಗ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಸ್ತದ ಚಿಹ್ನೆ ಮೇಲೆ ರಾಮಲಿಂಗರೆಡ್ಡಿ ಗೆದ್ದಿದ್ದಾರೆ. ಪಕ್ಷದ ಕಷ್ಟದ ಸಂದರ್ಭದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪಕ್ಷಕ್ಕೆ ಆಧಾರ ಸ್ತಂಭ. ಸೋನಿಯಾ ಗಾಂಧಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅದಕ್ಕೆ ಈ ಸಮಾರಂಭ ಮಾಡ್ತಾ ಇದ್ದೇವೆ. ಮತ್ತೊಬ್ಬ ನಾಯಕ ಧೃವನಾರಾಯಣ್ ಅವರು ಕೂಡ ಜವಾಬ್ದಾರಿ ಸ್ವೀಕಾರ ಮಾಡ್ತಾ ಇದ್ದಾರೆ. ಯುವ ನಾಯಕರು. ಈ ಇಬ್ಬರು ಸರಳ ಸಜ್ಜನಿಕೆಗೆ ಹೆಸರಾದವರು ಎಂದರು.
ಹೈಕಮಾಂಡ್ ನಮ್ಮನ್ನು ನಂಬಿದೆ:
ಕರ್ನಾಟಕದ ಕಾಂಗ್ರೆಸ್ ನಾಯಕರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಅಪಾರವಾದ ನಂಬಿಕೆ ಹೊಂದಿದೆ. ಹಾಗಾಗಿಯೇ ರಾಜ್ಯಸಭೆಯ ಪ್ರತಿಪಕ್ಷ ನಾಯಕರ ಸ್ಥಾನ ನೀಡಲಾಗಿದೆ. ಅಲ್ಲದೇ ಹಲವು ರಾಜ್ಯಗಳ ಜವಾಬ್ದಾರಿಯನ್ನು ಕರ್ನಾಟಕದ ನಾಯಕರಿಗೆ ವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾವು ಒಂದು ನಿರ್ಣಯ ಮಂಡನೆಗೆ ಉದ್ದೇಶಿಸಿದ್ದೇವೆ. ಸಭೆಯ ಕೊನೆಯಲ್ಲಿ ನಿರ್ಣಯ ಹೇಳಲಿದ್ದೇವೆ ಎಂದರು. ಇನ್ನೇನಿದ್ದರೂ ನಾವು ಜನಗಳ ಮಧ್ಯೆ ನಿಂತು ಹೋರಾಟ ಮಾಡಬೇಕು. ಕನಿಷ್ಠ ಎರಡು ಕಿ.ಮೀ. ಪಾದಯಾತ್ರೆ ಮಾಡಬೇಕು. ಹಾಗಾಗಿ ಜನರ ಮಧ್ಯೆ ಹೋರಾಟ ಮಾಡುವ ನಾಯಕರನ್ನು ಗುರುತಿಸಲು ತಂಡ ಕಳುಹಿಸುತ್ತೇವೆ. ಅಂತಹ ಪ್ರಮುಖರನ್ನು ಗುರುತಿಸಿ ಅಂತಹವರಿಗೆ ಮಾತ್ರ ಚುನಾವಣೆ ಟಿಕೆಟ್ ಕೊಡಲಾಗುತ್ತದೆ ಎಂದು ಟಿಕೆಟ್ ಆಕಾಂಕ್ಷಿಗಳಿಗೆ ತಿಳಿಸಿದರು.
ಕಾಂಗ್ರೆಸ್ ಪಕ್ಷ ಸೇರುವವರಿಗೆ ನಾನು ಮುಕ್ತ ಆಹ್ವಾನ ಕೊಡುತ್ತಿದ್ದೇನೆ. ಯಾವುದೇ ಷರತ್ತುಗಳಿಲ್ಲದೆ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವ ಯಾರಿಗಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಪಕ್ಷ ಬಿಟ್ಟು ಹೋದವರಿಗೂ ಮತ್ತೆ ಸೇರ್ಪಡೆಗೆ ಅವಕಾಶ ಕೊಡುತ್ತಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಮೀಸಲು ಹೋರಾಟದ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು ಎಂಬುದನ್ನು ಸದ್ಯದಲ್ಲೇ ಸ್ಪಷ್ಟಪಡಿಸುತ್ತೇವೆ. ಈ ಸಂಬಂಧ ಪಕ್ಷದ ಪ್ರಮುಖರೆಲ್ಲ ಇಷ್ಟರಲ್ಲೇ ಕುಳಿತು ಚರ್ಚಿಸಿ ನಿರ್ಧರಿಸುತ್ತೇವೆ. ಎಲ್ಲ ಜಾತಿ, ಧರ್ಮವನ್ನು ಸಮಾನವಾಗಿ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಡಿಕೆಶಿ ಹೇಳಿದರು.