ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಜೂನ್ 29ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಬಿ. ಕೆ. ಹರಿಪ್ರಸಾದ್ ಹಾಗೂ ನಜೀರ್ ಅಹಮದ್ ಗೆ ಪಕ್ಷದ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಿ ಫಾರಂ ನೀಡಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಇಬ್ಬರು ಅಭ್ಯರ್ಥಿಗಳಿಗೆ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಹಾಗೂ ಮುಖಂಡರ ಸಮ್ಮುಖದಲ್ಲಿ ಡಿಕೆಶಿ ಬಿ ಫಾರಂ ವಿತರಿಸಿದರು.
ಬಿ ಫಾರಂ ಸ್ವೀಕರಿಸಿದ ಬಿ. ಕೆ. ಹರಿಪ್ರಸಾದ್ ಮಾತನಾಡಿ, ಪಕ್ಷದ ಆಯ್ಕೆ ಸಂತಸ ತಂದಿದೆ. ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರ ಬೆಂಬಲದಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೇನೆ. ರಾಜ್ಯದಲ್ಲಿ ಸೇವೆ ಮಾಡುವ ಅವಕಾಶವನ್ನು ರಾಷ್ಟ್ರೀಯ ನಾಯಕರು ಒದಗಿಸಿಕೊಟ್ಟಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದೆ. ಸದ್ಯದ್ದು ಶಾಂತಿಯ ಸಮಯವಲ್ಲ, ಯುದ್ಧದ ಸಮಯವಾಗಿದೆ. ಬಿಜೆಪಿ ವಿರುದ್ಧ ಹೋರಾಟ ನಡೆಸಲು ಅವಕಾಶ ನೀಡಲಾಗಿದೆ. ನಾನು ಪಕ್ಷದಿಂದ ಟಿಕೆಟ್ ಕೇಳಿರಲಿಲ್ಲ, ಹಾಗಾಗಿ ಯಾವ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಬೇರೆಯವರಿಗೆ ಹೆಣ್ಣು ಹುಡುಕಲು ಹೋಗಿದ್ದೆ. ಆದರೆ ಅದು ನನಗೇ ಲಭಿಸಿದಂತಾಗಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಗಡಿಯಲ್ಲಿ ಚೀನಾದ ದಾಳಿ ನಿಜಕ್ಕೂ ದುರದೃಷ್ಟಕರ. ರಾಷ್ಟ್ರದ ಗಡಿ ರಕ್ಷಣೆ ಮಾಡುವ ಯೋಧರು ಪ್ರಾಣಾರ್ಪಣೆ ಮಾಡಿದ್ದು, ಇದಕ್ಕೆ ನೇರವಾಗಿ ಕೇಂದ್ರ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿದರು. ಇದರಿಂದಲೇ ಸರ್ಕಾರದ ನೇತೃತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಕೇವಲ ಭಾಷಣಕ್ಕೆ ಸೀಮಿತರಾಗಿದ್ದಾರೆ ಎನ್ನುವುದು ಅರಿವಾಗುತ್ತದೆ. ನಾನು ಅಧಿಕಾರಕ್ಕಾಗಿ ಯಾವುದೇ ಕಾರಣಕ್ಕೂ ಹೋರಾಟ ನಡೆಸಿಲ್ಲ. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗುವ ಯಾವ ಆಸೆಯೂ ನನಗಿಲ್ಲ. ಈಗ ಇರುವವರೇ ಸಮರ್ಥರಾಗಿದ್ದಾರೆ ಮುನ್ನಡೆಸಿಕೊಂಡು ಹೋಗುತ್ತಾರೆ ಎಂದರು.
ಹೋರಾಟಕ್ಕೆ ಮಾನ್ಯತೆ ಸಿಕ್ಕಿದೆ
ವಿಧಾನಪರಿಷತ್ ಆಯ್ಕೆಗೆ ಟಿಕೆಟ್ ಪಡೆದ ಮತ್ತೋರ್ವ ಅಭ್ಯರ್ಥಿ ನಜೀರ್ ಅಹಮದ್ ಮಾತನಾಡಿ, ಎನ್ಎಸ್ಯುಐ ನಿಂದ ವಿವಿಧ ಹಂತಗಳಲ್ಲಿ ನಡೆಸಿದ ಹೋರಾಟಕ್ಕೆ ಪಕ್ಷ ಬೆಂಬಲ ನೀಡಿದ್ದಲ್ಲದೆ ತನ್ನ ಹೋರಾಟವನ್ನು ಗುರುತಿಸಿ ಅವಕಾಶ ನೀಡಿದೆ. ಇದಕ್ಕೆ ಆಭಾರಿಯಾಗಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಕಾರ್ಯನಿರ್ವಹಿಸಿದ ಅನುಭವ ನನಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.