ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿವಿಧ ನಾಯಕರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಪಕ್ಷ ಸಂಘಟನೆ ಸಂಬಂಧ ಚರ್ಚಿಸಿದರು. ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿದ ವಿವಿಧ ಮುಖಂಡರು ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ವಿಚಾರವಾಗಿ ಗಂಭೀರ ಚರ್ಚೆ ನಡೆಸಿದ್ದಾರೆ.
ಮೊದಲು ಭೇಟಿ ಮಾಡಿದ ಶಾಸಕರಾದ ಅಮರೇಗೌಡ ಬಯ್ಯಾಪುರ, ಮಹಂತೇಶ್ ಕೌಜಲಗಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕರಾದ ಗೋವಿಂದಪ್ಪ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ, ಕೊಡಗು ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ನಿವೃತ್ತ ಐ.ಎ.ಎಸ್. ಅಧಿಕಾರಿ ಪುಟ್ಟಸ್ವಾಮಿ ಅವರ ಸಮೂಹ ಹಲವು ಮಹತ್ವದ ವಿಚಾರಗಳ ಕುರಿತು ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದರು.
ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷರು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎಸ್. ಪೊನ್ನಣ್ಣ, ಕೊಡಗು ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಅಬ್ದುಲ್ ರೆಹಮಾನ್, ಹಂಸ ಕೊಟ್ಟಮುಡಿ, ಪುಡ್ಡಿ ಗೋಣಿಕೊಪ್ಪ, ಅಶ್ರಫ್ ಕೊಟ್ಟಮುಡಿ ಅವರೊಂದಿಗೆ ಚರ್ಚಿಸಿದ್ದಾರೆ.
ಸದ್ಯವೇ ಡಿ.ಕೆ ಶಿವಕುಮಾರ್ ಮಡಿಕೇರಿ ಭಾಗಕ್ಕೆ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಸಂದರ್ಭ ಆ ಭಾಗದ ಕಾರ್ಯಕರ್ತರನ್ನು ಒಗ್ಗೂಡಿಸುವ ಹಾಗೂ ಅವರ ಜೊತೆ ಒಂದು ಸಂವಾದ ಕಾರ್ಯಕ್ರಮ ಆಯೋಜಿಸುವ ಸಂಬಂಧ ಚರ್ಚಿಸಿದ್ದಾರೆ.
ಇದನ್ನೂ ಓದಿ: ರಕ್ಷಣಾ ಪಡೆಗಳ ಸೇವೆ ಶ್ಲಾಘನೀಯ, ನಿಮ್ಮ ನೆರವಿಗೆ ಸರ್ಕಾರ ಸದಾ ಸಿದ್ಧ: ಸಿಎಂ ಅಭಯ
ಈ ಭೇಟಿಯ ಬಳಿಕ ಮಧ್ಯಾಹ್ನ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಶಾಸಕ ರಘುಮೂರ್ತಿ, ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ಸಿಐಟಿಯು ನಾಯಕಿ ಎಸ್. ವರಲಕ್ಷ್ಮೀ ಸಹ ಇಂದು ಶಿವಕುಮಾರನ ಭೇಟಿಯಾಗಿ ಚರ್ಚಿಸಿದ್ದು, ಸರ್ಕಾರದಿಂದ ಸಿಗಬೇಕಾದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಹೋರಾಟ ನಡೆಸಿದರೂ ಅದು ಫಲ ಕೊಡುತ್ತಿಲ್ಲ. ಇದರಿಂದ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ನಮ್ಮ ಪರ ದನಿ ಎತ್ತುವಂತೆ ಮನವಿ ಮಾಡಿದರು.
ಆದರೆ ಇಂದು ದಿನವಿಡಿ ಪಕ್ಷ ಸಂಘಟನೆ ಬಲವರ್ಧನೆ ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ವಿಚಾರವಾಗಿ ಮುಖಂಡರ ಜೊತೆ ಡಿಕೆಶಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೈಗೊಳ್ಳಬಹುದಾದ ಪ್ರವಾಸಗಳ ಕುರಿತು ಸಹ ಇದೇ ಸಂದರ್ಭ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ.
ಮೇಕೆದಾಟು ಯೋಜನೆ ಆರಂಭಿಸಲಿ:
ಈ ಮಧ್ಯೆ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು, ಇವತ್ತು ಶೇಕಾವತ್ ರಾಜ್ಯಕ್ಕೆ ಬಂದಿದ್ದಾರೆ. ಸಿಎಂ ಜೊತೆ ಮಾತನಾಡಿದ್ದಾರೆ. ಶುಭಗಳಿಗೆಯಲ್ಲಿ ಮೇಕೆದಾಟು ಯೋಜನೆ ಪ್ರಾರಂಭ ಮಾಡಲಿ. ಟೆಂಡರ್ ಕೊಟ್ಟು ಕೆಲಸ ಆರಂಭ ಮಾಡಲಿ. ಏನೇ ಅಡೆ ತಡೆ ಇದ್ರೂ ಅದನ್ನು ಬಗೆಹರಿಸಲಿ. ಆದಷ್ಟು ಬೇಗ ಭೂಮಿ ಪೂಜೆ ಮಾಡಲಿ ಎಂದು ಸಲಹೆ ನೀಡಿದರು.
ಸಿ.ಟಿ ರವಿ ಹೇಳಿಕೆ ಡಿಕೆಶಿ ಟಾಂಗ್ :
ಉತ್ತರ ಪ್ರದೇಶ ಮಾದರಿ ಜನಸಂಖ್ಯೆ ನಿಯಂತ್ರಣ ಕಾಯ್ದೆ ಮಾದರಿಯಲ್ಲೇ ರಾಜ್ಯದಲ್ಲೂ ಜಾರಿ ಮಾಡ್ತೀವಿ ಅಂತ ಸಿ.ಟಿ ರವಿ ಹೇಳಿಕೆ ವಿಚಾರ ಮಾತನಾಡಿ, ರವಿ ರಾಷ್ಟ್ರೀಯ ನಾಯಕರು. ನಾನು ರಾಜ್ಯದ ಕಾಂಗ್ರೆಸ್ ಅಧ್ಯಕ್ಷ. ಅವರು ಏನ್ ಹೇಳಿದ್ರೂ ನಡೆಯುತ್ತೆ.
ದೇಶದ ಬಗ್ಗೆ ದೊಡ್ಡದಾಗಿ ಮಾತನಾಡ್ತಾರೆ. ಮೊದಲು ಅಸೆಂಬ್ಲಿಯಲ್ಲಿ ಮಂಡನೆ ಮಾಡಲಿ. ಡಬಲ್ ಇಂಜಿನ್ ಸರ್ಕಾರ ಅಂತಾರೆ. ಈ ಯೋಜನೆಯಲ್ಲಿ ಅದನ್ನು ಮಾಡಲಿ. ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಿದ್ದಾರೆ. ಬೇರೆ ರಾಜ್ಯಗಳಿಗೆ ಮಾಡಿದ ಕೆಲಸ ಕೇಂದ್ರ ಮಾಡಲಿ. ಬಿಜೆಪಿ ಸಂಸದರು ಬಾಯಿ ಮುಚ್ಚಿಕೊಂಡಿದ್ದಾರೆ. ಅವರ ಬಾಯಿಗೆ ಒಂದು ಬೀಗ ಕೊಡಲಿ ಎಂದರು.