ಬೆಂಗಳೂರು: ಮೇಕೆದಾಟು ಪಾದಯಾತ್ರೆಯು ಡಿ.ಕೆ.ಶಿವಕುಮಾರ್ ಯಶಸ್ಸಲ್ಲ, ಕಾಂಗ್ರೆಸ್ ಯಶಸ್ಸೂ ಅಲ್ಲ. ಪಕ್ಷಬೇಧ ಮರೆತು ನಮ್ಮೊಂದಿಗೆ ಹೆಜ್ಜೆ ಹಾಕಿದ ರಾಜ್ಯದ ಜನರ ಯಶಸ್ಸು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಮೇಕೆದಾಟು ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮ ಯಶಸ್ಸಿಗೆ ಬಹಳ ಮಂದಿ ಗುರುಹಿರಿಯರು ನಮಗೆ ಆಶೀರ್ವಾದ ಮಾಡಿದ್ದಾರೆ. ಮುರುಘಾ ಮಠದ ಶ್ರೀಗಳು ಸುಮಾರು 15 ಶ್ರೀಗಳ ಜತೆ ಪಾದಯಾತ್ರೆಗೆ ಬಂದು ನಮಗೆ ಹಾರೈಸಿದ್ದಾರೆ. ಅವರೆಲ್ಲರ ಪಾದಗಳಿಗೆ ನಾನು ಸಾಷ್ಟಾಂಗ ನಮಸ್ಕರಿಸಲು ಬಯಸುತ್ತೇನೆ. ನಮ್ಮ ಐದು ಜನ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧೃವನಾರಾಯಣ್, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ ಹಾಗೂ ಸತೀಶ್ ಜಾರಕಿಹೊಳಿ ಅವರು ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದಾರೆ ಎಂದರು.
ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಾಮಾರಾಜನಗರ, ತುಮಕೂರು, ಕೋಲಾರ, ಬೆಂಗಳೂರು ಶಾಸಕರು, ಪರಿಷತ್ ಸದಸ್ಯರು, ಮಾಜಿ ಮಹಾಪೌರರು, ಮಾಜಿ ಪಾಲಿಕೆ ಸದಸ್ಯರುಗಳಾದಿಯಾಗಿ ಎಲ್ಲರೂ ಸೇರಿದ್ದಾರೆ. ನೀವೆಲ್ಲರೂ ಈ ಪಾದಯಾತ್ರೆಯಲ್ಲಿ ನಡೆದು ಇತಿಹಾಸ ಪುಟ ಸೇರಿದ್ದೀರಿ. ಪಾದಯಾತ್ರೆ ಕುರಿತು ಬಹಳ ಟೀಕೆ ಟಿಪ್ಪಣಿಗಳು ಸುರಿಮಳೆಯಾದವು. ನಾನು ರಾಮನಗರದಲ್ಲಿ ಪಾದಯಾತ್ರೆ ಮಾಡುವಾಗ ಸರ್ಕಾರದಿಂದ ಸಾಕಷ್ಟು ತೊಂದರೆ ಅನುಭವಿಸಿದೆ ಎಂದು ತಿಳಿಸಿದರು.
ಪಾದಯಾತ್ರೆ ವೇಳೆ ಜಿಲ್ಲಾಧಿಕಾರಿಗಳಿಂದ 10 ಪ್ರಕರಣ ದಾಖಲಿಸಿ, ನನ್ನನ್ನು ಜೈಲಿಗೆ ಕಳುಹಿಸಲು ಪಣ ತೊಟ್ಟಿದ್ದಾರೆ. ನೀರಿಗಾಗಿ ನಡೆಯುತ್ತಿರುವ ಈ ನಡಿಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ನಾವು ಸಂಗಮದಿಂದ ಪಾದಯಾತ್ರೆ ಆರಂಭಿಸಿದೆವು. ಮಹಿಳೆಯರು ಮನೆ ಮುಂದೆ ರಂಗೋಲಿ ಹಾಕಿ ನಮಗೆ ಸ್ವಾಗತಿಸಿದರು. ಬಡವರು, ರೈತರು ನೀರಿಗಾಗಿ ಹೆಜ್ಜೆ ಹಾಕುತ್ತೇವೆ ಎಂದು ನಡೆಯಲು ಕಷ್ಟವಾದರೂ ಹೆಜ್ಜೆ ಹಾಕಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಲಯದಿಂದ ತಮಿಳುನಾಡಿಗೆ 178 ಟಿಎಂಸಿ ನೀರನ್ನು ಕೊಟ್ಟು, ಉಳಿದ ನೀರನ್ನು ಬಳಸಿಕೊಳ್ಳಿ ಎಂದು ತೀರ್ಪು ಬಂದಿತು. ಎಂ.ಬಿ. ಪಾಟೀಲರು ಸಚಿವರಾಗಿದ್ದಾಗ ಡಿಪಿಆರ್ ಸಿದ್ಧಪಡಿಸಿದರು. ಅದನ್ನು ಪರಿಷ್ಕರಿಸಬೇಕು ಎಂದಾಗ ನಾನು ಸಚಿವನಾಗಿದ್ದಾಗ ಅದನ್ನು ಸರಿಪಡಿಸಿ ಸಲ್ಲಿಸಿದೆವು ಎಂದು ವಿವರಿಸಿದರು.
ಇದನ್ನೂ ಓದಿ: ಬಹುತೇಕ ಭಾರತೀಯರಿಗೆ ಹೆಂಡತಿ ಯಾವಾಗಲೂ ಪತಿಗೆ ವಿಧೇಯಳಾಗಬೇಕಂತೆ: ಅಧ್ಯಯನ ವರದಿ
ಈ ಯೋಜನೆಗೆ ತಮಿಳುನಾಡಿನ ಒಂದು ಎಕರೆ ಭೂಮಿ ಹೋಗುವುದಿಲ್ಲ. ಮಳವಳ್ಳಿ ಹಾಗೂ ಕನಕಪುರದ ಜಮೀನು ಮಾತ್ರ ಈ ಯೋಜನೆಗೆ ಹೋಗುತ್ತದೆ. ನಮ್ಮ ಜನ ತ್ಯಾಗ ಮಾಡಲು ಬದ್ಧರಾಗಿದ್ದಾರೆ. ನಮ್ಮ ನೀರು, ಭೂಮಿ, ಹಣ. ಹೀಗಾಗಿ ಈ ಯೋಜನೆಗೆ ಯಾರ ಅನುಮತಿ ಬೇಕಾಗಿಲ್ಲ. ರಾಜ್ಯದ ಕುಡಿಯುವ ನೀರಿನ ಯೋಜನೆಗೆ ಯಾರ ಅನುಮತಿ ಬೇಕಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಇದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಯೋಜನೆ ಮಾಡುತ್ತೇವೆ ಎಂದಿದ್ದಾರೆ. ಆದರೆ ಎರಡೂವರೆ ವರ್ಷವಾಗಿದೆ, ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲ ಸಂಸದರು ಕಾಂಗ್ರೆಸ್ ಸಂಸದರ ಜತೆ ಸೇರಿ ಸಂಸತ್ ಮುಂದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಾವು ಅದೇ ಹೋರಾಟವನ್ನು ಮತ್ತೆ ಮಾಡಿದ್ದೇವೆ ಎಂದರು.
ಈಗ ನದಿ ಜೋಡಣೆ ವಿಚಾರಗಳು ಚರ್ಚೆಯಾಗುತ್ತಿವೆ. ಕೇಂದ್ರ ಬಜೆಟ್‌ನಲ್ಲಿ ಅದರ ಪ್ರಸ್ತಾಪವಾಗಿದೆ. ಮುಖ್ಯಮಂತ್ರಿಗಳೇ 25 ಸಂಸದರನ್ನು ಹೊಂದಿದ್ದರೂ ಪರಿಸರ ಇಲಾಖೆಯ ಅನುಮತಿ ಪಡೆಯಲು ನಿಮ್ಮಿಂದ ಸಾಧ್ಯವಾಗಿಲ್ಲ. ಪ್ರಧಾನಮಂತ್ರಿ ಮುಂದೆ ಒಂದು ದಿನ ಬೇಡಿಕೆ ಇಟ್ಟಿಲ್ಲ. ಆದರೂ ಈ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಅನುಮತಿ ತಂದು ಯೋಜನೆ ಆರಂಭಿಸಿ, ನಿಮಗೆ ಬೆಂಬಲ ನೀಡಲು ನಾವು ಬದ್ಧವಾಗಿದ್ದೇವೆ ಎಂದರು.