ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕೋವಿಡ್ ಸಮಯದಲ್ಲಿ ಯಾವ ರೀತಿ ಜವಾಬ್ದಾರಿ ನಿಭಾಯಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುರ್ಜೇವಾಲ ಜೊತೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಸ್ಪತ್ರೆಗಳ ಮಾಹಿತಿ ಹೇಗೆ ಪಡೆಯಬೇಕು, ಸಾಮಾನ್ಯ ಜನರಿಗೆ ಹೇಗೆ ಸಹಾಯ ಮಾಡಬೇಕು, ಕಾಂಗ್ರೆಸ್ ಪಕ್ಷ ನಿಭಾಯಿಬೇಕಾದ ಜವಾಬ್ದಾರಿ ಬಗ್ಗೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.
51 ಮಂದಿ ನಾಯಕರು ಸಲಹೆ ನೀಡಿದ್ದಾರೆ. ಕಾಂಗ್ರೆಸ್ನಿಂದ ರಾಜ್ಯಮಟ್ಟದ ಕೋವಿಡ್ ಸೆಂಟರ್ ಮಾಡ್ತೇವೆ. ಖಾಸಗಿ ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡಲು ಆಗುತ್ತಿಲ್ಲ. ಅವರ ಸಹಾಯಕ್ಕೂ ಕಾಂಗ್ರೆಸ್ ನಿಲ್ಲುತ್ತದೆ. ಏಕಾಏಕಿಯಾಗಿ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಆರ್ಥಿಕ ಪ್ಯಾಕೇಜ್ ನೀಡಬೇಕು. ಪ್ಯಾಕೇಜ್ ಕೊಡುವಂತೆ ಒತ್ತಾಯ ಮಾಡ್ತೇವೆ. ಯಾವ ರೀತಿ ಒತ್ತಾಯ ಮಾಡಬೇಕು ಎಂದು ಚರ್ಚೆ ಮಾಡ್ತೇವೆ ಎಂದರು.
ಅಕ್ಕಿ ಪ್ರಮಾಣ ಕಡಿತ ವಿಚಾರದ ಬಗ್ಗೆ ಮಾತನಾಡಿ, ಸರ್ಕಾರಕ್ಕೆ ನಾಚಿಕೆ ಆಗಬೇಕು. ಎರಡು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಏಳು ಕೆಜಿ ಅಕ್ಕಿ ಕೊಡುತ್ತಿದ್ದರು. ಅದನ್ನು ಎರಡು ಕೆಜಿ ಮಾಡಿದ್ದಾರೆ. ಇವರ ಕೈಯಿಂದ ಕೊಡುತ್ತಿದ್ದಾರಾ? ಇದಕ್ಕಿಂತ ದುರಂತ ಮತ್ತೊಂದಿಲ್ಲ ಎಂದರು.
ಕಾಂಗ್ರೆಸ್ ಹೋರಾಟ ನಡೆಸುವ ವಿಚಾರ ಪ್ರಸ್ತಾಪಿಸಿ, ಇದು ಹೋರಾಟ ಮಾಡುವ ಸಮಯವಲ್ಲ. ಜನರಿಗೆ ಸಹಾಯ ಮಾಡುವ ಸಮಯ. ಮುಂದೆ ಹೋರಾಟ ಮಾಡೋಣ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಸದ್ಯ ಜನರ ಕಷ್ಟಕ್ಕೆ ನಾವು ಸ್ಪಂದಿಸಬೇಕು. ಇದು ಆರೋಗ್ಯ ವಿಚಾರ. ಈ ಸಮಯದಲ್ಲಿ ಜನರ ಜೊತೆಗೆ ಇರಬೇಕು. ಈಗ ಹೋರಾಟ ಮುಖ್ಯವಲ್ಲ. ಆ ಬಗ್ಗೆ ಚರ್ಚೆ ಇಲ್ಲ ಎಂದು ಹೇಳಿದರು.
ಕೆಪಿಸಿಸಿಯಿಂದ ವೈದ್ಯರ ಸೆಲ್ನಿಂದ ಸಹಾಯ ಸಿಗಲಿದೆ. 24X7 ಜನರಿಗೆ ಸಹಾಯ ಮಾಡಲು ಸಹಾಯವಾಣಿ ಮಾಡ್ತೀವಿ. ಕಾಂಗ್ರೆಸ್ ಪಕ್ಷದಿಂದ ಸಹಾಯ ಮಾಡಲು ಸೂಚಿಸಿದ್ದಾರೆ. ಸಮಸ್ಯೆ ಆಗ್ತಿರುವ ಕುಟುಂಬಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ. ಕೂಡಲೇ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.