ಬೆಂಗಳೂರು: ನಮ್ಮ ಟೈರ್ ಪಂಚರ್ ಆಗ್ತದೋ ಅಥವಾ ಅವರ ಟೈರ್ ಪಂಚರ್ ಆಗ್ತೋದೋ ಜನರು ತೀರ್ಮಾನ ಮಾಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಹಲವು ವಿಚಾರಗಳ ಮೂಲಕ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಪ್ರಜಾಧ್ವನಿ ಯಾತ್ರೆ ನೋಡಿ ಬಿಜೆಪಿ ಮತ್ತು ಜೆಡಿಎಸ್ಗೆ ಹಿಂದೆ ಆಗ್ತಿದೆ. ಪ್ರಜಾಧ್ವನಿ ಯಾತ್ರೆಗೆ ಸೇರುತ್ತಿರುವ ಜನ ನೋಡಿದರೆ ಅದು ಸಾಬೀತಾಗುತ್ತಿದೆ. ಕಾಂಗ್ರೆಸ್ನವರು ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡ್ತಾ ಬಂದಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂ ಕೊಟ್ಟಿದ್ದಾರೆ. ನಾವು ಕೃಷ್ಣ ಯೋಜನೆಗೆ 15,000 ಕೋಟಿ ರೂ ಬಂಡವಾಳ ಹಾಕಿದ್ದೇವೆ. ಆ ಯೋಜನೆಗೂ ಸಹ ಹಣ ಕೊಡಬಹುದಿತ್ತಲ್ಲಾ? ಮೇಕೆದಾಟು ಯೋಜನೆಗೆ ಒಂದು ಸ್ಪಷ್ಟ ತೀರ್ಮಾನ ಮಾಡಬಹುದಿತ್ತಲ್ವಾ? ಅದಕ್ಕೆ ನಾವೀಗ ಟೆಕ್ನಿಕಲ್ ಟೀಮ್ ಜೊತೆಗೆ ಚರ್ಚೆ ಮಾಡಿದ್ದೇವೆ. ಯಾವ ಕಾರ್ಯಕ್ರಮ ರೂಪಿಸಬೇಕು ಅಂತ ಚರ್ಚೆ ಮಾಡಿಸಿದ್ದೇವೆ ಎಂದು ವಿವರಿಸಿದರು.
ಯಾತ್ರೆಗೆ ಎರಡು ಮೂರು ದಿನ ವಿರಾಮ: ಇಂದು ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ನಾನು, ಸಲೀಂ ಅಹ್ಮದ್, ಪರಮೇಶ್ವರ್ ಹಾಗೂ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಕಚೇರಿಯಿಂದ ತೆರಳುತ್ತಿದ್ದೇವೆ. ಉಳಿದ ನಾಯಕರು ನೇರವಾಗಿ ಅಲ್ಲಿಗೆ ಬರಲಿದ್ದಾರೆ. ಇದಾದ ನಂತರ ಶಿವಮೊಗ್ಗ ಜಿಲ್ಲೆಯ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಅಲ್ಲಿಂದ ಹೊಸದುರ್ಗ, ಹೊಳಲ್ಕೆರೆ ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಳ್ಳುತ್ತೇವೆ. ನಂತರ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಅದಕ್ಕಾಗಿ ಎರಡು ಮೂರು ದಿನ ವಿರಾಮ ಇರಲಿದೆ. ನಂತರ ಮಂಡ್ಯ, ಮೈಸೂರು ಜಿಲ್ಲೆಯ ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ ಎಂಬ ಮಾಹಿತಿ ನೀಡಿದರು.
ಯಾತ್ರೆ ಕುರಿತು ಅನ್ಯ ಪಕ್ಷಗಳ ನಾಯಕರ ಟೀಕೆ ಬಗ್ಗೆ ಕೇಳಿದಾಗ, 'ಸಿದ್ದರಾಮಯ್ಯ ಅವರು ನಿರಂತರ ಪ್ರವಾಸ ವೇಳಾಪಟ್ಟಿ ನಿಗದಿ ಮಾಡಿಕೊಂಡಿದ್ದಾರೆ. ನಾವು ಇಲ್ಲಿ ಹತ್ತಿರದ ಕ್ಷೇತ್ರಗಳಿಗೆ ತೆರಳುತ್ತಿದ್ದೇವೆ. ನಾವು ಎಲ್ಲೆ ಹೋದರು ನಮಗೆ ಜನರಿಂದ ಸಿಗುತ್ತಿರುವ ಬೆಂಬಲಕ್ಕೆ ಮಾಧ್ಯಮಗಳ ಕ್ಯಾಮೆರಾಗಳು ಸಾಕ್ಷಿ. ನಮಗೆ ಸಿಗುತ್ತಿರುವ ಜನ ಬೆಂಬಲದಿಂದ ಬಿಜೆಪಿ ಹಾಗೂ ದಳದವರಿಗೆ ಭೀತಿ ಎದುರಾಗಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ನಾವು ರೈತರನ್ನು ರಕ್ಷಿಸುವ ಕಾರ್ಯಕ್ರಮ ಮಾಡುತ್ತೇವೆ. ಯಡಿಯೂರಪ್ಪ ಸೇರಿದಂತೆ ಯಾರೇ ನಮ್ಮ ಯಾತ್ರೆ ಪಂಚರ್ ಆಗಲಿದೆ ಎಂದು ಹೇಳಲಿ. ಅಂತಿಮವಾಗಿ ಯಾರು ಪಂಚರ್ ಆಗಲಿದ್ದಾರೆ ಎಂದು ಮತದಾರರು ತೀರ್ಮಾನ ಮಾಡುತ್ತಾರೆ' ಎಂದು ತಿರುಗೇಟು ನೀಡಿದರು.
ಎರಡನೇ ಹಂತದ ಯಾತ್ರೆ ಆರಂಭ: ರಾಜ್ಯ ಕಾಂಗ್ರೆಸ್ ನಾಯಕರು ಕೈಗೊಂಡಿರುವ ಪ್ರಜಾಧ್ವನಿ ಯಾತ್ರೆಯ ಎರಡನೇ ಹಂತ ಆರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದಕ್ಷಿಣ ಕರ್ನಾಟಕ ಭಾಗದಲ್ಲಿ ನೇತೃತ್ವ ವಹಿಸಿದ್ದಾರೆ. ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದ ನೇತೃತ್ವ ವಹಿಸಿದ್ದಾರೆ.
ಮೂರು ದಿನದಿಂದ ಎರಡನೇ ಹಂತದ ಯಾತ್ರೆ ಆರಂಭವಾಗಿದ್ದು, ಅತ್ಯಂತ ಯಶಸ್ವಿಯಾಗಿ ಮುಂದುವರಿದಿದೆ. ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪಾದಯಾತ್ರೆ, ಬಸ್ ಯಾತ್ರೆಯ ಮೊರೆ ಹೋಗಿದ್ದಾರೆ. ಈಗಾಗಲೇ ಮೇಕೆದಾಟು ಪಾದಯಾತ್ರೆ ಮುಗಿಸಿರುವ ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆಯನ್ನೂ ರಾಜ್ಯದಲ್ಲಿ ಯಶಸ್ವಿಗೊಳಿಸಿದ್ದಾರೆ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕೈ ನಾಯಕರು ಮುಂಬರುವ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿದ್ದಾರೆ.
ಇದನ್ನೂ ಓದಿ: ಇಂಡಿಯನ್ ಎನರ್ಜಿ ವೀಕ್-2023 ಉದ್ಘಾಟಿಸಿದ ಪ್ರಧಾನಿ : ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳಿಗೆ ಚಾಲನೆ