ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೋಮವಾರ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿಲ್ಲ. ದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯ ನಡೆಸಲಿರುವ ವಿಚಾರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾನುವಾರ ಸಂಜೆ ಕೆಪಿಸಿಸಿ ಅಧ್ಯಕ್ಷರು ದಿಲ್ಲಿಗೆ ಪ್ರಯಾಣ ಬೆಳೆಸಿದ್ದು, ಸೋಮವಾರ ಬೆಳಗ್ಗೆ ವಿಚಾರಣೆ ಎದುರಿಸಿ ನಂತರ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿ ವಾಪಸಾಗಲಿದ್ದಾರೆ.
ಒಂದೆಡೆ ಭಾರತ್ ಜೋಡೋ ಯಾತ್ರೆಯ ಸಿದ್ಧತೆಗಳ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಈ ವಿಚಾರಣೆ ಎದುರಾಗಿ ಒಂದಿಷ್ಟು ಕಿರಿಕಿರಿ ಉಂಟುಮಾಡಿದೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದ ಇಡಿ ಈಗಾಗಲೇ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದೆ.
ನ್ಯಾಯಾಲಯದಲ್ಲಿ ಇದರ ವಿಚಾರಣೆ ಕೂಡ ಪ್ರಗತಿಯಲ್ಲಿದೆ. ಈ ನಡುವೆ ಜಾರಿ ನಿರ್ದೇಶನಾಲಯ ಹೆಚ್ಚುವರಿ ಎಫ್‍ಐಆರ್ ಅನ್ನು ದಾಖಲಿಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ನೋಟಿಸ್ ನೀಡಿತ್ತು. ಅದರ ಅನುಸಾರ ಡಿ. ಕೆ ಶಿವಕುಮಾರ್ ವಿಚಾರಣೆಯನ್ನು ಎದುರಿಸಲಿದ್ದಾರೆ.
ವಿಶೇಷ ಅಂದರೆ ಹೆಚ್ಚುವರಿ ಎಫ್ಐಆರ್ನಲ್ಲಿ ಯಾವ ಆರೋಪ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ತಾವು ಈಡಿ ವಿಚಾರಣೆಗೆ ಸಹಕಾರ ನೀಡುವುದಾಗಿ ತಿಳಿಸಿರುವ ಕೆಪಿಸಿಸಿ ಅಧ್ಯಕ್ಷರು ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರ್ಕಾರ ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಕೈಗೊಂಡಿರುವ ಪಾದಯಾತ್ರೆ ಸೆಪ್ಟೆಂಬರ್ 30ಕ್ಕೆ ರಾಜ್ಯ ಪ್ರವೇಶಿಸಲಿದೆ. ಕರ್ನಾಟಕದಲ್ಲಿ ಯಾತ್ರೆಯನ್ನು ಯಶಸ್ಸುಗೊಳಿಸಬೇಕೆಂದು ಪ್ರಯತ್ನಿಸಿರುವ ಡಿ. ಕೆ ಶಿವಕುಮಾರ್ ಹಗಲು-ರಾತ್ರಿ ಎನ್ನದೆ ಪ್ರವಾಸ ಮಾಡಿ ಪಾದಯಾತ್ರೆಯ ಮಾರ್ಗ, ಯಾತ್ರೆ ತಂಡ ತಂಗುವ ಸ್ಥಳಗಳ ಪರಿಶೀಲನೆ ನಡೆಸಿದ್ದು, ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.
ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಹೂಹಾರ ಹಾಕಬೇಡಿ: ಡಿಕೆಶಿ