ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆ ಕಾಂಗ್ರೆಸ್ ಗೆಲುವಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯತಂತ್ರ ಹೆಣೆಯುವ ಕೆಲಸವನ್ನು ಜೋರಾಗಿಯೇ ನಡೆಸಿದ್ದಾರೆ.
ಕಳೆದ ಒಂದೆರಡು ವಾರದಿಂದ ಸಾಕಷ್ಟು ಬಿರುಸಿನಿಂದ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಸಿರುವ ಡಿಕೆಶಿ, ಈಗಾಗಲೇ ಬೆಂಗಳೂರು ನಗರ ಶಾಸಕರ ಜತೆ ಸಾಕಷ್ಟು ಸುತ್ತು ಸಭೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಎರಡು ಸಾರಿ ಪ್ರದಕ್ಷಿಣೆ ಮಾಡಿದ್ದಾರೆ. ರಾಜಕಾಲುವೆ ಸಮಸ್ಯೆ ಹಾಗೂ ದಟ್ಟಣೆ ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಬೆಂಗಳೂರು ಉಸ್ತುವಾರಿ ಸಚಿವರಾಗಿ ಮುಂದಿನ ಬಿಬಿಎಂಪಿ ಚುನಾವನೆಯನ್ನು ಕಾಂಗ್ರೆಸ್ ವಶವಾಗಿಸುವುದು ಡಿಕೆಶಿ ಅವರ ಗುರಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಬೆನ್ನಲ್ಲೇ ನಡೆಯುತ್ತಿರುವ ಈ ಬಿಬಿಎಂಪಿ ಚುನಾವಣೆಯನ್ನೂ ಇದೇ ಗೆಲುವಿನ ಅಲೆಯ ಮಧ್ಯೆ ಗೆಲ್ಲುವ ಗುರಿ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ಸಭೆಯಲ್ಲಿ ಸುರ್ಜೇವಾಲ ಭಾಗಿ ವಿಚಾರ: ಯಾರು, ಯಾವ ದೂರು ಬೇಕಾದರೂ ಕೊಡಲಿ- ಡಿ.ಕೆ.ಶಿವಕುಮಾರ್
ಈ ನಿಟ್ಟಿನಲ್ಲಿ ನಿನ್ನೆ (ಗುರುವಾರ ) ಸಹ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬೆಂಗಳೂರು ವ್ಯಾಪ್ತಿಯ ಅಭ್ಯರ್ಥಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದರು. ಕಾರ್ಯಾಧ್ಯಕ್ಷರು ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ, ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಹಿರಿಯ ಮುಖಂಡರಾದ ಬಿ ಎಲ್ ಶಂಕರ್, ಯು ಬಿ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿ ಚರ್ಚೆ ನಡೆಸಿದ ವಿಷಯಗಳು : ವಾರ್ಡ್ ಮರುವಿಂಗಡಣೆ, ಬಿಬಿಎಂಪಿ ವಿಭಜನೆ ಸಂಬಂಧ ಚರ್ಚೆ ನಡೆಯಿತು. ಕಾಂಗ್ರೆಸ್ ಶಾಸಕರಿಂದ ಈಗಾಗಲೇ ಅಭಿಪ್ರಾಯ ಸಂಗ್ರಹಿಸಿರುವ ಡಿಕೆಶಿ, ನಿನ್ನೆ ಬಿಬಿಎಂಪಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಜತೆ ಚರ್ಚಿಸಿದರು. ನವೆಂಬರ್ ವೇಳೆಗೆ ಪಾಲಿಕೆ ಚುನಾವಣೆ ನಡೆಯಬಹುದು ಎಂಬ ಮಾಹಿತಿ ಇರುವ ಹಿನ್ನೆಲೆ ಅಗತ್ಯ ತಯಾರಿ ಮಾಡಿಕೊಳ್ಳಲು ಸೂಚಿಸಿದ್ದಾರೆ.
ಒಟ್ಟಾರೆ, ಬೆಂಗಳೂರು ನಗರ ಸಚಿವರಾಗಿ ಬಿಬಿಎಂಪಿ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಡಿಕೆ ಶಿವಕುಮಾರ್ ತಮ್ಮ ನೇತೃತ್ವದಲ್ಲಿ ಯಶಸ್ವಿಯಾಗಿ ಪಾಲಿಕೆಯನ್ನು ಕೈವಶ ಮಾಡಿಕೊಳ್ಳುವ ತಯಾರಿಯಲ್ಲಿ ಇದ್ದಾರೆ. ಹಾಗಾಗಿ, ನಿನ್ನೆಯ ಸಭೆಯಲ್ಲಿ ಕಾಂಗ್ರೆಸ್ ನಾಯಕರಿಂದ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಸಲಹೆ ಪಡೆದಿದ್ದಾರೆ. ಈ ಮೂಲಕ ಮುಂಬರುವ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಪಕ್ಷ ಯಾವ ರೀತಿಯ ಸಿದ್ಧತೆ ಕೈಗೊಳ್ಳಬೇಕು, ಬೆಂಗಳೂರಿಗೆ ಯಾವ ಮಾದರಿಯ ಪ್ರಣಾಳಿಕೆ ರಚಿಸಿಕೊಳ್ಳಬೇಕು ಎಂಬ ವಿಚಾರವಾಗಿಯೂ ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ : Karnataka rice row : ನಾವು ಯಾರನ್ನೂ ಅಕ್ಕಿ ಪುಕ್ಸಟ್ಟೆ ಕೊಡಿ ಎಂದು ಕೇಳ್ತಿಲ್ಲ: ಡಿ ಕೆ ಶಿವಕುಮಾರ್