ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ವಿವಿಧ ಮುಖಂಡರ ಜೊತೆ ಸಭೆ ನಡೆಸಿದರು. ಬೆಳಗ್ಗೆ ತಮ್ಮ ಸದಾಶಿವನಗರದ ನಿವಾಸದಲ್ಲಿ ವಿವಿಧ ಸಭೆ ನಡೆಸಿದ್ದ ಶಿವಕುಮಾರ್, ಮಧ್ಯಾಹ್ನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಎರಡು ಪ್ರಮುಖ ಸಭೆ ನಡೆಸಿದ್ದಾರೆ.
ಮೊದಲು ಅವರು ವಿಜಯನಗರ ಜಿಲ್ಲೆ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟು ಹೊಸದಾಗಿ ನಿರ್ಮಾಣವಾಗಿರುವ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭೆ ಕ್ಷೇತ್ರವನ್ನು ಸದ್ಯ ಬಿಜೆಪಿ ಕರುಣಾಕರ ರೆಡ್ಡಿ ಪ್ರತಿನಿಧಿಸುತ್ತಿದ್ದಾರೆ. 2008ರಲ್ಲಿ ಶಾಸಕರಾಗಿದ್ದ ಕರುಣಾಕರ ರೆಡ್ಡಿ 2013ರಲ್ಲಿ ಮಾಜಿ ಸಿಎಂ ಎಂಪಿ ಪ್ರಕಾಶ್ ಅವರ ಪುತ್ರ ಎಂಪಿ ರವೀಂದ್ರ ವಿರುದ್ಧ ಸೋತಿದ್ದರು. 2018ರ ಚುನಾವಣೆಯಲ್ಲೂ ರವೀಂದ್ರ ಕಣಕ್ಕಿಳಿದಿದ್ದರು. ಆದರೆ, ಸೋಲನುಭವಿಸಿದ್ದರು. ಅದಾದ ಬಳಿಕ ಅನಾರೋಗ್ಯದ ಹಿನ್ನೆಲೆ ಅವರು ನಿಧನರಾಗಿದ್ದಾರೆ.
ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಗೆ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸಬೇಕಾಗಿದೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಐದು ಸಾರಿ ಗೆಲುವು ಸಾಧಿಸಿದ ಹಿರಿಮೆ ಕಾಂಗ್ರೆಸ್ಗೆ ಇದೆ. ಹಿಂದೆ ಜನ ಕೈಹಿಡಿದ ರೀತಿಯಲ್ಲೇ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸ ಇದೆ. ಇದರಿಂದಲೇ ಇಂದು ಡಿಕೆಶಿ ಇಲ್ಲಿನ ನಾಯಕರನ್ನು ಕರೆದು ಸಮಾಲೋಚಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಸೆಳೆಯುವ ಮಹಾದಾಸೆ ಹೊಂದಿರುವ ಕಾಂಗ್ರೆಸ್ ಸ್ಥಳೀಯ ನಾಗರಿಕರು ಎಷ್ಟು ಸಹಕಾರ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಅಕೈ ಪದ್ಮಸಾಲಿ ಭೇಟಿ:
ಸಾಮಾಜಿಕ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕೈ ಪದ್ಮಸಾಲಿ ಹಾಗೂ ಅಪ್ಸಾ ಸಂಘಟನೆಗಳ ಪ್ರತಿನಿಧಿಗಳು, ಆಪ್ಸಾ ಕಾಲೇಜು ಆಡಳಿತ ಮಂಡಳಿ ಪ್ರತಿನಿಧಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಲೈಂಗಿಕ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿರುವ ಕಾಂಗ್ರೆಸ್ ಪಕ್ಷದ ಬಲ ವರ್ಧನೆಗೆ ಸಂಘಟನೆಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಕುರಿತು ಇದೇ ಸಂದರ್ಭ ಚರ್ಚೆ ನಡೆಯಿತು. ಮುಂದಿನ ಚುನಾವಣೆ ವೇಳೆಗೆ ಲೈಂಗಿಕ ಅಲ್ಪಸಂಖ್ಯಾತರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಚುನಾವಣೆ ತಂತ್ರಗಾರಿಕೆ ಹೆಣೆಯುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ.
ಈಗಾಗಲೇ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡಿದ ಮಾದರಿಯಲ್ಲೇ ರಾಜ್ಯದಲ್ಲಿಯೂ ಅಧಿಕಾರ ನೀಡುವ ಹಾಗೂ ಇವರಿಗೆ ಇರುವ ಕೀಳರಿಮೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡುವುದಾಗಿ ಡಿಕೆಶಿ ಇದೇ ಸಂದರ್ಭ ಭರವಸೆ ನೀಡಿದ್ದಾರೆ.