ಬೆಂಗಳೂರು: ಚಿತ್ರ ಮಂದಿರಗಳಲ್ಲಿ ಚಲನಚಿತ್ರಗಳ ಪ್ರದರ್ಶನದ ವೇಳೆ ಅಂಧ ಮತ್ತು ಕಿವುಡ ವ್ಯಕ್ತಿಗಳಿಗೆ ಆಡಿಯೋ ವಿವರಣೆ ನೀಡುವ ಪರಿಣಿತ ತಂತ್ರಜ್ಞರನ್ನು ಒದಗಿಸುವ ಮಾನದಂಡಗಳು ಸದ್ಯ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಮಾಣೀಕರಿಸಿದ (ಸರ್ಟಿಫೈಡ್) ಚಲನಚಿತ್ರಗಳಿಗೆ ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ.
ಕೇಂದ್ರ ಸರ್ಕಾರದ ಈ ಹೇಳಿಕೆಯಿಂದಾಗಿ ಬರೀ ಕನ್ನಡ ಭಾಷಾ ಚಲನಚಿತ್ರಗಳಿಗೆ ಸದ್ಯಕ್ಕೆ ನಿರಾಳ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 2024ರ ಮಾರ್ಚ್ 15ರಂದು ಹೊರಡಿಸಿದ್ದ ಮಾನದಂಡಗಳನ್ನು ಪ್ರಶ್ನಿಸಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಸಿ.ಪಿ. ಕುಮಾರ್ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಪೀಠಕ್ಕೆ ಕೇಂದ್ರ ಸರ್ಕಾರದ ವಕೀಲರು ವಿವರಿಸಿದರು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಚಿತ್ರ ಮಂದಿರಗಳಲ್ಲಿ ಚಲನಚಿತ್ರಗಳ ಪ್ರದರ್ಶನದ ವೇಳೆ ಅಂಧ ಮತ್ತು ಕಿವುಡ ವ್ಯಕ್ತಿಗಳಿಗೆ ಆಡಿಯೋ ವಿವರಣೆ ನೀಡುವ ಪರಿಣಿತ ತಂತ್ರಜ್ಞರನ್ನು ಒದಗಿಸುವ ಮಾನದಂಡಗಳು ಸದ್ಯ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಸರ್ಟಿಫೈಡ್ ಮಾಡಲಾದ ಚಲನಚಿತ್ರಗಳಿಗೆ ಅನ್ವಯವಾಗಲಿದೆ ಎಂದು ಸ್ಪಷ್ಟನೆ ನೀಡಿದರು.
ಈ ಅಂಶ ದಾಖಲಿಸಿಕೊಂಡ ಪೀಠ, ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಸರ್ಟಿಫೈಡ್ ಮಾಡಲಾದ ಚಲನಚಿತ್ರಗಳಿಗೆ ಮಾನದಂಡಗಳು ಅನ್ವಯವಾಗಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕನ್ನಡ ಭಾಷೆಯ ಚಲನಚಿತ್ರಗಳ ವಿಚಾರವಾಗಿ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಓದಿ: ಬಿಜೆಪಿ ವಿರುದ್ಧ ಜಾಹೀರಾತು: ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ಹೈಕೋರ್ಟ್ ತಡೆ