ಬೆಂಗಳೂರು: ಏ. 17ರಂದು ನಡೆಯುವ 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬಿ ಫಾರಂ ವಿತರಿಸಿದರು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರದ ಅಭ್ಯರ್ಥಿಗಳಿಗೆ ಡಿ.ಕೆ.ಶಿವಕುಮಾರ್ ಬಿ ಫಾರಂ ವಿತರಿಸಿದ್ದು, ಪಕ್ಷದ ನಾಯಕರು ಉಪಸ್ಥಿತರಿದ್ದರು.
ಮಸ್ಕಿ ಉಪಚುನಾವಣಾ ಅಭ್ಯರ್ಥಿಯಾದ ಬಸವನಗೌಡ ತುರವಿ ಹಾಳ ಅವರ ಬಿ ಪಾರಂಅನ್ನು ರಾಯಚೂರು ಜಿಲ್ಲಾಧ್ಯಕ್ಷ ಬಿ.ವಿ.ನಾಯ್ಕ್ ಅವರಿಗೆ ಡಿಕೆಶಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ರವಿ ಬೋಸರಾಜ್ ಉಪಸ್ಥಿತರಿದ್ದರು. ಬಳಿಕ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ನಾರಾಯಣರಾವ್ ಅವರಿಗೆ 'ಬಿ' ಫಾರಂ ವಿತರಿಸಿದರು. ಈ ಭಾಗದ ಪ್ರಮುಖ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಲ್ಲಮ್ಮ ಅವರ ಪುತ್ರ ಗೌತಮ್ ಹಾಜರಿದ್ದರು.
ಬಿ ಫಾರಂ ವಿತರಿಸಿದ ನಂತರ ಇಬ್ಬರೂ ಅಭ್ಯರ್ಥಿಗಳ ಜೊತೆ ಪ್ರತ್ಯೇಕವಾಗಿ ಚರ್ಚಿಸಿದ ಡಿಕೆಶಿ, ಉಪಚುನಾವಣೆ ಗೆಲುವು ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಾವು ಕಳೆದುಕೊಂಡಿರುವ ಕ್ಷೇತ್ರವನ್ನ ಮರಳಿ ಪಡೆಯಲು ಸಾಕಷ್ಟು ಚರ್ಚಿಸಿ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಬೆಲೆ ಏರಿಕೆ ನೀತಿಯನ್ನು ಜನರಿಗೆ ಅರಿವಾಗುವ ರೀತಿ ವಿವರಿಸಿ ಎಂದು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭ ನೀಡಿದ ಕೊಡುಗೆಗಳನ್ನು ಜನರಿಗೆ ವಿವರಿಸಿ ಮಾತಾಡಿ ಎಂದು ಸಲಹೆ ನೀಡಿ ಕಳುಹಿಸಿದ್ದಾರೆ.
ಮಸ್ಕಿ ಕ್ಷೇತ್ರದಿಂದ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಬಸವಕಲ್ಯಾಣದಿಂದ ಇದುವರೆಗೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಜೆಡಿಎಸ್ ಸಹ ಎರಡು ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದು, ಬಸವಕಲ್ಯಾಣದಿಂದ ಅಭ್ಯರ್ಥಿ ಹೆಸರು ಘೋಷಿಸಿದೆ. ಮಸ್ಕಿ ಅಭ್ಯರ್ಥಿಯ ಘೋಷಣೆ ಆಗಬೇಕಿದೆ. ರಾಜ್ಯ ಕಾಂಗ್ರೆಸ್ ನಾಯಕರು ಏ. 29ರಂದು ಮಸ್ಕಿ ಹಾಗೂ 30ರಂದು ಬಸವಕಲ್ಯಾಣದಲ್ಲಿ ತಮ್ಮ ಅಭ್ಯರ್ಥಿಗಳ ಜೊತೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದಾರೆ.
ಓದಿ: ಮೂರು ಕ್ಷೇತ್ರಗಳ ಉಪಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸಭೆ ಕರೆದ ಡಿಕೆಶಿ