ಬೆಂಗಳೂರು: ಆರಂಭದಲ್ಲಿ ಒಂದಷ್ಟು ದೂರ ಒಟ್ಟಾಗಿ ಹೆಜ್ಜೆ ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಂತರ ಪಾದಯಾತ್ರೆಯುದ್ದಕ್ಕೂ ಎಲ್ಲಿಯೂ ಒಟ್ಟಾಗಿ ತೆರಳಲಿಲ್ಲ.
ಪಾದಯಾತ್ರೆಯ ಕಡೆಯ ದಿನವಾದ ಇಂದು ಬೆಂಗಳೂರಿನ ಅರಮನೆ ಮೈದಾನದಿಂದ ಹೊರಟ ಪಾದಯಾತ್ರೆ ಈಗಾಗಲೇ ಬಹುತೇಕ ಮೈಸೂರು ರಸ್ತೆ ಚಾಮರಾಜಪೇಟೆಯ ಈದ್ಗಾ ಮೈದಾನ ತಲುಪಿದೆ. ಇಲ್ಲಿ ಭೋಜನ ವಿರಾಮದ ಬಳಿಕ ಪಾದಯಾತ್ರೆ ಮುಂದುವರಿದು ನ್ಯಾಷನಲ್ ಕಾಲೇಜು ಮೈದಾನವನ್ನು ತಲುಪಲಿದೆ.
ಬೆಳಗ್ಗೆ ಅರಮನೆ ಮೈದಾನದಿಂದ ಒಟ್ಟಾಗಿ ಹೊರಟ ರಾಜ್ಯ ಕಾಂಗ್ರೆಸ್ ನಾಯಕರು ಕ್ರಮೇಣ ಪ್ರತ್ಯೇಕವಾಗಿ ತೆರಳಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳಿದ ಕೆಲಹೊತ್ತಿನ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರಳಿದರು. ಅರಮನೆ ಮೈದಾನದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಸದಾಶಿವನಗರದ ಶಿವಾಜಿ ಪ್ರತಿಮೆ ಬಳಿಗೂ ಉಭಯ ನಾಯಕರು ಪ್ರತ್ಯೇಕವಾಗಿಯೇ ತೆರಳಿದ್ದರು. ಇನ್ನು ಮಲ್ಲೇಶ್ವರಂ 18ನೇ ಕ್ರಾಸ್ ಸಮೀಪ ಇರುವ ಡಾಕ್ಟರ್ ರಾಜಕುಮಾರ್ ಪ್ರತಿಮೆಗೆ ಸಹ ಇಬ್ಬರು ನಾಯಕರು ಪ್ರತ್ಯೇಕವಾಗಿಯೇ ಪುಷ್ಪಾರ್ಚನೆ ಮಾಡಿದರು. ಅಲ್ಲಿಂದ ಮುಂದೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯಕ್ಕೂ ಪ್ರತ್ಯೇಕವಾಗಿಯೇ ಭೇಟಿ ಕೊಟ್ಟರು.
ಬೆಂಬಲಿಗರ ಜೊತೆ ಸೇರ್ಪಡೆ: ಇಬ್ಬರೂ ನಾಯಕರು ತಮ್ಮ ತಮ್ಮ ಬೆಂಬಲಿಗರ ಜೊತೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು ಗೋಚರಿಸಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಹೆಜ್ಜೆ ಹಾಕಿದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೆಜ್ಜೆಯಿಟ್ಟರು.
ಇದನ್ನೂ ಓದಿ: ಇವರು IPS ಅವಳಿ ಸಹೋದರರು! ಸಾಧಕರ ಅಪರೂಪದ ಫೋಟೋಗೆ ಮೆಚ್ಚುಗೆ
ಪಾದಯಾತ್ರೆಯುದ್ದಕ್ಕೂ ಸಿದ್ದರಾಮಯ್ಯ ಸಂಚರಿಸುತ್ತಿದ್ದ ವೇಳೆ ಅವರಿಗೆ ಸಂಬಂಧಪಟ್ಟ ಗೀತೆಗಳು ಕೇಳಿಬಂದರೆ ಡಿ.ಕೆ.ಶಿವಕುಮಾರ್ ಮಾರ್ಗದಲ್ಲಿ ಅವರಿಗೆ ಸಂಬಂಧಿಸಿದ ಹಾಡುಗಳು ಮೊಳಗಿದವು. ಪಾದಯಾತ್ರೆಯಲ್ಲಿ ಸಾವಿರಾರು ಜನ ಕಾರ್ಯಕರ್ತರು ಪಾಲ್ಗೊಂಡರೂ ಸಹ ಮಾರ್ಗದುದ್ದಕ್ಕೂ ಒಂದೇ ಕಡೆ ದೊಡ್ಡಮಟ್ಟದ ಸಂದಣಿ ಕಾಣಸಿಗಲಿಲ್ಲ. ಪ್ರತ್ಯೇಕವಾಗಿ ನಿಧಾನವಾಗಿ ಪಾದಯಾತ್ರೆ ಸಾಗಿದ ಹಿನ್ನೆಲೆಯಲ್ಲಿ ಎಲ್ಲೆಡೆ ವಿಪರೀತ ಸಂಚಾರ ದಟ್ಟಣೆ ಸಮಸ್ಯೆ ಕಾಡಿತು. ಜನ ಕಾಂಗ್ರೆಸ್ ನಾಯಕರಿಗೆ ಹಿಡಿಶಾಪ ಹಾಕಿದರು. ತುರ್ತು ಕಾರ್ಯದ ನಿಮಿತ್ತ ತೆರಳುತ್ತಿದ್ದವರಿಗೆ ಅನಾನುಕೂಲ ಉಂಟಾಗಿ ಸಾಕಷ್ಟು ಸಮಸ್ಯೆ ತಲೆದೋರಿತು.