ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಅವರ ಮನೆಗೆ ತೆರಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನ ಪಡೆದು ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದು ಅವರು ನಮ್ಮ ಜೊತೆ ಇಲ್ಲದಿದ್ರೂ ಅವರ ವಿಚಾರಗಳು ಶಾಶ್ವತ. 15 ದಿನಗಳ ಹಿಂದೆ ನನ್ನ ನೆನೆಸಿಕೊಂಡಿದ್ರಂತೆ. ನಾಡಿನ ದೊಡ್ಡ ಆಸ್ತಿಯನ್ನ ಇಂದು ಕಳೆದುಕೊಂಡಿದ್ದೇವೆ. ನಮ್ಮ ಭಾಷೆ, ಸಂಸ್ಕೃತಿಗೆ ದೊಡ್ಡ ಶಕ್ತಿ ಕೊಟ್ಟಿದ್ದಾರೆ. ಅವರ ಭಾವನೆಗಳು ಅಮರವಾಗಿ ಉಳಿಯಲಿ. ನಾನೂ ಸಹ ಅವರ ದೊಡ್ಡ ಅಭಿಮಾನಿ ಎಂದರು.
ಇನ್ನು ಇವರು ನಮ್ಮ ಕ್ಷೇತ್ರದವರು ಅನ್ನೋ ಅಭಿಮಾನ, ನಾಡಿನ ಆಸ್ತಿ ಅನ್ನೋದು ಹೆಮ್ಮೆಯ ವಿಷಯವಾಗಿದೆ. ಮನುಷ್ಯನಿಗೆ ಸಾವು ನಿಶ್ಚಿತ. ಅದರೆ ಅವರು ನಾಡಿಗೆ ದೊಡ್ಡ ಕೊಡುಗೆ ಕೊಟ್ಟು ಹೋಗಿದ್ದಾರೆ. ಅಲ್ಲದೇ ನಮ್ಮ ಕ್ಷೇತ್ರದಲ್ಲಿ ಕೆರೆ ಕುಂಟೆಗಳಿಗೆ ಅವರು ಜಮೀನು ದಾನ ನೀಡಿದ್ದಾರೆ. ಅವರ ಅಗಲಿಕೆ ತುಂಬಾ ನೋವಿನ ವಿಚಾರ. ಆ ನೋವಿನ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಭಕ್ಕೆ ನೀಡಿ ಅವರ ಆತ್ಮಕ್ಕೆ ಭಗಂವತ ಶಾಂತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಕವಿ ನಿಸಾರ್ ಅಹಮದ್ ಅವರಿಗೆ ಡಿ.ಕೆ.ಶಿವಕುಮಾರ್ ನಮನ ಸಲ್ಲಿಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಿಸಾರ್ ಅಹಮ್ಮದ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ನಾನು ಬಿಎಸ್ಇ ಓದುವ ಸಮಯದಲ್ಲಿ ನನಗೆ ಗುರುಗಳಾಗಿದ್ದರು. ಅವರ ನಿಧನ ತುಂಬಲಾರದ ನಷ್ಟ ಎಂದರು.