ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ, ಬೆಂಗಳೂರಿಗೆ ಒಂದು ಕಳಂಕವಾಗಿದ್ದು, ಅದರ ನೇರ ಪಾತ್ರಧಾರರು ಕಾಂಗ್ರೆಸ್ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರಣ ಇಲ್ಲದೆ ನಡೆದ ಘಟನೆಯಾಗಿದೆ. ವೈಯಕ್ತಿಕ ದ್ವೇಷ, ಹೊತ್ತಿ ಉರಿಯುತ್ತಿರುವ ದಳ್ಳುರಿ, ಒಳ ಜಗಳ, ಅಂತರ್ಯುದ್ಧದಿಂದ ಇಡೀ ಬೆಂಗಳೂರಿಗೆ ಕಪ್ಪು ಚುಕ್ಕೆ ತಂದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲಾಕ್‌ಡೌನ್ ಸಂದರ್ಭ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಚೆಕ್ ಹಿಡಿದುಕೊಂಡು ಓಡಾಡಿದ್ದಾರೆ. ಅದನ್ನು ನೋಡಿದ್ದೇವೆ. ಆದರೆ, ಆ ಚೆಕ್ ಕ್ಯಾಶ್ ಆಗಿರುವುದನ್ನು ನಾನು ನೋಡಿಲ್ಲ. ಸರ್ಕಾರದಿಂದ 4 ಲಕ್ಷ ಕಾರ್ಮಿಕರನ್ನು ವಿವಿಧ ಭಾಗಗಳಿಗೆ ಕಳುಹಿಸಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಸಿಎಂ ಹಾಗೂ ಪಿಎಂ ಕೇರ್ ನಿಧಿಗೆ ಹಣ ಕೊಡಬಹುದಿತ್ತು. ಅದನ್ನು ಅವರು ಮಾಡಿಲ್ಲ. ಅವರ ಚೆಕ್ ಬರೀ ಗಾಳಿಯಲ್ಲಿ ಓಡಾಡುತ್ತಿದೆ. ಗಾಳಿ ಹಾಕಿಕೊಳ್ಳಲು ಚೆಕ್ ಬಳಸಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಗೃಹ ಸಚಿವರಲ್ಲಿ ಕ್ಷಮೆಯಾಚಿಸಬೇಕು: ಗೃಹ ಸಚಿವ ಬೊಮ್ಮಾಯಿ ವಿರುದ್ಧ ಏಕವಚನ ಬಳಸಿ, ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ವಿಷಾದ ವ್ಯಕ್ತಪಡಿಸಿದರೆ ಸಾಲದು. ಡಿ.ಕೆ. ಶಿವಕುಮಾರ್ ಗೃಹ ಸಚಿವರ ಬಳಿ ಕ್ಷಮೆಯಾಚಿಸಬೇಕು ಎಂದು ಸಚಿವ ಅಶೋಕ್ ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿಗಳ ಮಗ ಹಾಗೂ ರಾಜ್ಯದ ಗೃಹ ಸಚಿವರು ಅವರ ಬಗ್ಗೆ ಇಂಥ ಹೇಳಿಕೆ ನೀಡುವುದು ಅಪರಾಧ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಅಂತಾರೆ. ಡಿಕೆಶಿ ರಾಜಕೀಯದಲ್ಲಿ ಬಹಳ ಆಸೆ ಇಟ್ಟುಕೊಂಡಿದ್ದಾರೆ. ಬಹಳ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಇರುವವರು. ಇದು ಅವರ ರಾಜಕೀಯಕ್ಕೆ ಒಂದು ಹಂಪ್ ಆಗುತ್ತದೆ. ಇದಕ್ಕೆ ಅವರು ಆ ಹೇಳಿಕೆ ಕೊಟ್ಟಾಗಲೇ ಇತಿಶ್ರೀ ಹಾಡಬಹುದಾಗಿತ್ತು. ಒಂದು ದಿನದ ಬಳಿಕ ವಿಷಾದ ವ್ಯಕ್ತಪಡಿಸಿದ್ದಾರೆ. ವಿಷಾದ ಅಲ್ಲ, ಕ್ಷಮೆ ಕೇಳಬೇಕೆಂದು ಎಂದರು.
ಡಿ.ಕೆ. ಶಿವಕುಮಾರ್‌ಗೆ ಆಸಕ್ತಿ ಇದ್ದಿದ್ದರೆ, ಒಂದು ತಿಂಗಳ ಮುಂಚೆಯೇ ಶಾಸಕರನ್ನು ಕರೆಸಿ ಮಾತನಾಡಬಹುದಿತ್ತು. ಎಸ್‌ಡಿಪಿಐ, ಶಾಸಕರು ಹಾಗೂ ಕಾರ್ಪೊರೇಟರ್ ಮೂವರ ನಡುವೆ ಆಗಿರುವ ಗಲಾಟೆ ಇದು. ಇದು ಟ್ರಯಾಂಗ್ಯುಲರ್ ಫೈಟ್ ಎಂದು ಟೀಕಿಸಿದರು.
ಕಾಂಗ್ರೆಸ್ ಬಣ್ಣ ಬಯಲು: ಕೆ.ಜಿ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖ ಬಟಾಬಯಲಾಗಿದೆ. ಅಖಂಡ ಶ್ರೀನಿವಾಸ್ ಮತ್ತು ಸ್ಥಳೀಯರ ಜೊತೆ ಸಂಬಂಧ ಚೆನ್ನಾಗಿ ಇರಲಿಲ್ಲ ಎಂದು ಸ್ವತಃ ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿದ್ದಾರೆ. ಈಗ ಕಾಂಗ್ರೆಸ್ ಒಳ ರಾಜಕೀಯವೇ ಗಲಭೆಗೆ ಕಾರಣ ಎಂಬುದು ಬಯಲಾದಂತಾಗಿದೆ ಎಂದರು.
ಜಮೀರ್ ಈಗ ಹೊಸ ಮನೆ ಕಟ್ಟಿಸಿಕೊಡುತ್ತೇವೆ ಅಂತಿದ್ದಾರೆ. ಆದರೆ ಅಖಂಡ ಶ್ರೀನಿವಾಸ್ ಮೂರ್ತಿಯವರ ಸುಟ್ಟು ಹೋಗಿರುವ ಮನೆ ವಾಪಸ್ ಬರುತ್ತಾ? ಅಖಂಡ ಅವರ ತಂದೆಯವರು ಕಟ್ಟಿಸಿದ ಮನೆ ಅದಾಗಿತ್ತು. ಈಗ ಜಮೀರ್ ಆ ಭಾವನೆಯುಳ್ಳ ಮನೆ ಕಟ್ಟಿಸ್ತಾರಾ ಎಂದು ಪ್ರಶ್ನಿಸಿದರು.
ಮಧ್ಯರಾತ್ರಿ ಎಲ್ಲಿ ಕೊತಂಬರಿ ಸೊಪ್ಪು ಸಿಗುತ್ತೆ?: ಅದ್ಯಾರೋ ಮಧ್ಯರಾತ್ರಿ ಒಂದು ಗಂಟಗೆ ಕೊತಂಬರಿ ಸೊಪ್ಪು ತರೋಕೆ ಹೋಗಿದ್ದರು ಅಂತಾರೆ. ಮಧ್ಯರಾತ್ರಿ ಅದೇನ್ ಕೊತಂಬರಿ, ಕರಿಬೇವಿನ ಸೊಪ್ಪು ಸಿಗುತ್ತೆ ಎಂದು ಅಶೋಕ್ ವ್ಯಂಗ್ಯವಾಡಿದರು.
ಅಖಂಡ ಶ್ರೀನಿವಾಸ್ ಮೂರ್ತಿ ಸೆಳೆಯಲು ಬಿಜೆಪಿ ಒತ್ತಡ ಹಾಕುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಖಂಡ ಶ್ರೀನಿವಾಸ್ ಮೂರ್ತಿಯವರನ್ನು ಬಿಜೆಪಿಗೆ ಕರೆಯೋದೆ ಇಲ್ಲ. ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳೋ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು.