ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆ ಸದ್ಯ ಚುರುಕುಗೊಂಡರೂ ಕೂಡ ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಘಟನೆ ನಡೆದ ದಿನದಿಂದ ಹಲವಾರು ಆರೋಪಿಗಳನ್ನ ವಶಕ್ಕೆ ಪಡೆದು ಕೆಲವರನ್ನು ಬಳ್ಳಾರಿ ಜೈಲು, ಇನ್ನುಳಿದವರನ್ನ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು.
ಸದ್ಯ ಘಟನೆ ಸಂಬಂಧ ಜೈಲಿನಿಂದ ಗಲಭೆಕೋರರನ್ನ ಕಸ್ಟಡಿಗೆ ಪಡೆದುಕೊಳ್ಳಲು ತನಿಖಾ ತಂಡ ಪಟ್ಟಿ ರೆಡಿ ಮಾಡಿದೆ. ಗಲಭೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲಿದ್ದಾರೆ. ಗಲಭೆಯ ಪ್ರಮುಖ ರೂವಾರಿಗಳಾದ ಅಪ್ನಾ, ಮುಭಾರಕ್, ಮುದಾಶೀರ್ ಸೇರಿ 10ರಿಂದ 15 ಗಲಭೆಕೋರರನ್ನ ಜೈಲಿನಿಂದ ಮತ್ತೆ ತನಿಖಾ ತಂಡ ವಶಕ್ಕೆ ಪಡೆಯಲಿದೆ ಎಂದು ತಿಳಿದು ಬಂದಿದೆ.
ಆರೋಪಿಗಳ ಬಂಧನ ಕಾರ್ಯ ಬಹುತೇಕ ಮುಗಿದಿರೋ ಹಿನ್ನೆಲೆ ಪ್ರಮುಖರ ಹೆಸರು ಪಟ್ಟಿ ಮಾಡಿ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುತ್ತೆ. ಗಲಭೆಗೆ ಪ್ರಮುಖ ಕಾರಣಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯಲಿದೆ ತನಿಖಾ ತಂಡ.
ಹಾಗೆಯೇ ಈ ಆರೋಪಿಗಳು ಹೇಳುವ ಮಾಹಿತಿಯನ್ನ ಘಟನೆಗೆ ಪ್ರಮುಖ ಸಾಕ್ಷಿಯನ್ನಾಗಿ ಪರಿಗಣನೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.