ಬೆಂಗಳೂರು: ಡಿ.ಜೆ ಹಳ್ಳಿ-ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಎನ್ಐಎ ಇಂದ ಮಾಜಿ ಮೇಯರ್ ಸಂಪತ್ ರಾಜ್ ಆಪ್ತರ ವಿಚಾರಣೆ ಚುರುಕುಗೊಂಡಿದೆ.
ಸಂಪತ್ ರಾಜ್ ದೂರದ ಸಂಬಂಧಿ ಹಾಗೂ ಪಿಎ ಅರುಣ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದು, ಎನ್ಐಎ ಬುಧವಾರ ಜೈಲಿಗೆ ತೆರಳಿ ಆರೋಪಿಗಳಾದ ಅರುಣ್ ರಾಜ್ ಹಾಗೂ ಮುಜಾಹಿದ್ದೀನ್ ಅವರನ್ನು ಪ್ರತ್ಯೇಕ ವಿಚಾರಣೆ ಮಾಡಿದ್ದಾರೆ.
ಆರೋಪಿ ಮುಜಾಹಿದ್ದೀನ್ ನೇತೃತ್ವದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನಗೆ ಬೆಂಕಿ ಹಾಕಲಾಗಿತ್ತು. ಬೆಂಕಿ ಇಡಲು ಮಾಜಿ ಮೇಯರ್ ಸಂಪತ್ ಅರುಣ್ಗೆ ಸೂಚನೆ ನೀಡಿದ್ದು, ಅರುಣ್ ಯುವಕರನ್ನು ಕೆರಳಿಸಿ ಶಾಸಕರ ಮೇಲೆ ದಾಳಿ ಮಾಡಿದ್ದಾರೆ. ಮೊದಲು ಯುವಕರ ಗುಂಪು ಡಿ.ಜೆ ಹಳ್ಳಿ ಠಾಣೆ ಬಳಿ ಗುಂಪಾಗಿ ಗಲಾಟೆ ಮಾಡಲು ಶುರು ಮಾಡಿದ್ದರು. ಆದರೆ, ಅರುಣ್ ಕೆರಳಿಸಿದ ಕಾರಣ ಪೊಲೀಸ್ ಠಾಣೆಯಿಂದ ಶಾಸಕರ ಮನೆಯತ್ತ ಹೊರಟಿದ್ದರು ಎನ್ನಲಾಗಿದೆ.
ಇನ್ನು ಗಲಭೆಕೋರರ ಕ್ಯಾಪ್ಟನ್ ಆಗಿ ಆರೋಪಿ ಮುಜಾಹಿದ್ದೀನ್ ಪಾತ್ರವಹಿಸಿ, ಧರ್ಮದ ಹೆಸರಿನಲ್ಲಿ ಗಲಭೆಕೋರರ ಎತ್ತಿಕಟ್ಟಿ ದಾಳಿ ಮಾಡಿಸಿದ್ದರು. ಹೀಗಾಗಿ ಆರೋಪಿಗಳ ಪ್ರತ್ಯೇಕ ವಿಚಾರಣೆ ಬಳಿಕ ಎದುರು ಬದುರು ಕೂರಿಸಿ ಇಂಟ್ರಾಗೇಟ್ ಮಾಡಲು ಎನ್.ಐ.ಎ ನಿರ್ಧಾರ ಮಾಡಿದೆ.
ಈಗಾಗಲೇ ಅರುಣ್ ಅಣತಿಯಂತೆ ಗಲಭೆ ಮಾಡಿರೋದಾಗಿ ಎನ್ಐಎ ಎದುರು ಮುಜಾಹಿದ್ದೀನ್ ಬಾಯಿ ಬಿಟ್ಟಿದ್ದು, ಸಂಪತ್ತ್ ರಾಜ್ ಸೂಚನೆಯಂತೆ ಅರುಣ್ ಗಲಭೆ ಸೃಷ್ಟಿಸಲು ಪ್ರಮುಖ ಕಾರಣ ಅನ್ನೋದು ತಿಳಿದು ಬಂದಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳ ಹೇಳಿಕೆಗಳನ್ನು ದಾಖಲು ಮಾಡಿಕೊಂಡು ಎನ್ಐಎ ತನಿಖೆ ಚುರುಕುಗೊಳಿಸಿದೆ.