ಬೆಂಗಳೂರು: ಪಡಿತರ ಚೀಟಿ ಇಲ್ಲದ ಮಲ್ಲೇಶ್ವರ ಕ್ಷೇತ್ರದ ಜನರು ಸಲ್ಲಿಸಿರುವ ಬೇಡಿಕೆಗೆ ಸ್ಪಂದಿಸಿ ಡಿಸಿಎಂ ಅಶ್ವತ್ಥ್ ನಾರಾಯಣ್, ಫೌಂಡೇಶನ್ ಆ್ಯಪ್ ಮೂಲಕ ಒಟಿಪಿ ಪಡೆದು ದಿನಸಿ ಕಿಟ್ ವಿತರಿಸಿದ್ದಾರೆ.
ಮಲ್ಲೇಶ್ವರದ ನಾಗರಿಕರು, ಬಡ ಕಾರ್ಮಿಕರಿಗೆ ಅಶ್ವತ್ಥ್ ನಾರಾಯಣ್ ಫೌಂಡೇಶನ್ ವತಿಯಿಂದ 12,000 ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಇನ್ನು ಕಿಟ್ ವಿತರಿಸುವ ಕಾರ್ಯಕ್ಕೆ ಸುಬೇದಾರ್ ಪಾಳ್ಯದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು. ನಂತರ ದಿನಸಿ ದಾಸ್ತಾನು ಇರುವ ಗೋದಾಮಿಗೆ ಭೇಟಿ ನೀಡಿ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿ, ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು.
ಸರ್ಕಾರದ ವತಿಯಿಂದ ಪಡಿತರ ವಿತರಿಸಿದ ಬಳಿಕ ಮಲ್ಲೇಶ್ವರ ಕ್ಷೇತ್ರದ ಇನ್ನಷ್ಟು ಮಂದಿ ದಿನಸಿ ಕಿಟ್‌ಗೆ ಬೇಡಿಕೆ ಸಲ್ಲಿಸಿದ್ದರು. ಕ್ಷೇತ್ರದ ಜನರ ಬೇಡಿಕೆಗೆ ಸ್ಪಂದಿಸಿ ಬಡವರು, ಶ್ರೀಮಂತರು ಎನ್ನದೇ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಫೌಂಡೇಶನ್ ವತಿಯಿಂದ ದಿನಸಿ ಕಿಟ್ ತಲುಪಿಸುವ ವ್ಯವಸ್ಥೆಯನ್ನು ಆ್ಯಪ್ ಮೂಲಕ ಮಾಡಲಾಗುತ್ತಿದೆ. ಈ ತಂತ್ರಜ್ಞಾನದ ಬಳಕೆ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಏನಿದು ಆ್ಯಪ್ ತಂತ್ರಜ್ಞಾನ
ಪಡಿತರ ವಿತರಣೆ ಕಾರ್ಯಕ್ಕಾಗಿಯೇ ತಂತ್ರಜ್ಞಾನದ ಮೊರೆ ಹೋದ ಫೌಂಡೇಷನ್, ಅದಕ್ಕಾಗಿ ಆ್ಯಪ್ ಸಿದ್ಧಪಡಿಸಿ ಈವರೆಗೆ ದಿನಸಿ ಕಿಟ್ ಪಡೆಯದವರ ಪಟ್ಟಿಯನ್ನು ಮೊಬೈಲ್ ಸಂಖ್ಯೆ ಸಹಿತ ಆ್ಯಪ್‌ಗೆ ಅಪ್‌ಲೋಡ್ ಮಾಡಲಾಗಿದೆ. ನಂತರ ಆ್ಯಪ್ ಮೂಲಕ ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಿ ಅದೇ ಮೊಬೈಲ್‌ನಲ್ಲಿ ಒಟಿಪಿ ತೋರಿಸಿದವರಿಗೆ ಪಡಿತರ ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಪಡಿತರ ದುರುಪಯೋಗವಾಗುವುದು ತಪ್ಪಿತ್ತು ಎಂದು ಆ್ಯಪ್ ವೈಶಿಷ್ಟ್ಯವನ್ನು ವಿವರಿಸಿದರು.
ಇನ್ನು ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹೊಂದಿರುವವರ ಜೊತೆಗೆ ರೇಷನ್ ಕಾರ್ಡ್ ಇಲ್ಲದವರಿಗೂ ಪಡಿತರ ವಿತರಿಸಲು ತೀರ್ಮಾನಿಸಿತ್ತು. ಆದರೆ ಕಾರ್ಡ್ ಇಲ್ಲದೇ ಇರುವವರಿಗೆ ಪಡಿತರ ವಿತರಿಸುವ ವಿಚಾರದಲ್ಲಿ ಎದುರಾದ ಗೊಂದಲಗಳನ್ನು ಬಗೆಹರಿಸಿ ಅರ್ಹರಿಗೆ ಪಡಿತರ ವಿತರಿಸಲು ಅಶ್ವತ್ಥ್ ನಾರಾಯಣ್ ಫೌಂಡೇಷನ್ ತೀರ್ಮಾನಿಸಿತು.
ಅದರಂತೆ ಮಲ್ಲೇಶ್ವರ ಕ್ಷೇತ್ರದಲ್ಲಿ ಪಡಿತರ ಹಂಚಿಕೆಗೆ ಪಾರದರ್ಶಕ ವ್ಯವಸ್ಥೆ ರೂಪಿಸುವ ಹೊಣೆ ಹೊತ್ತ ಕಾರ್ಯಕರ್ತರ ತಂಡ, ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಆಹಾರ ಇಲಾಖೆಗೆ ಕಳುಹಿಸಿ ಅಂಗೀಕಾರ ಪಡೆಯಿತು. ಬಳಿಕ ಬಿಬಿಎಂಪಿಯಿಂದ ಬಂದಿದ್ದ ದಿನಸಿ ಕಿಟ್‌ಗಳ ವಿತರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿತು ಎಂದು ಅವರು ಮಾಹಿತಿ ನೀಡಿದರು.