ಬೆಂಗಳೂರು: ಮುಖ್ಯಮಂತ್ರಿ ಆಗಿ ವರ್ಷ ಮುಗಿಯುವ ಮೊದಲೇ ಯಡಿಯೂರಪ್ಪ ಅವರಿಗೆ ಮೂರನೇ ಬಾರಿ ಬಂಡಾಯದ ಬಿಸಿ ತಟ್ಟಿದೆ. ಈ ಬಾರಿಯ ಬಂಡಾಯದ ಕೇಂದ್ರ ಬಿಂದು ಬಸನಗೌಡ ಪಾಟೀಲ್ ಯತ್ನಾಳ್..! ವಿರೋಧದ ನಡುವೆಯೂ ಪಕ್ಷಕ್ಕೆ ಕರೆ ತಂದ ವ್ಯಕ್ತಿಯಿಂದಲೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಇದನ್ನೂ ಓದಿ: ನಮ್ಮ ನಾಯಕರು ಮೋದಿ, ಅಮಿತ್ ಶಾ ಹಾಗೂ ನಡ್ಡಾ: ಯತ್ನಾಳ್
ಹೌದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತನ್ನವರಿಂದಲೇ ಪ್ರತಿ ಬಾರಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆಪರೇಷನ್ ಕಮಲದ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಯಡಿಯೂರಪ್ಪ ಸಂಪುಟ ರಚನೆ ವೇಳೆ ಉಮೇಶ್ ಕತ್ತಿ ಹಾಗೂ ಮುರುಗೇಶ್ ನಿರಾಣಿ ಬಂಡಾಯ ಶಮನ ಮಾಡಬೇಕಾಯಿತು. ಉಪ ಚುನಾವಣೆ ನಂತರ ಸಂಪುಟ ವಿಸ್ತರಣೆ ವೇಳೆಯಲ್ಲಿಯೂ ಮತ್ತೊಮ್ಮೆ ಕತ್ತಿ ವರಸೆ ಎದುರಿಸಬೇಕಾಯ್ತು. ಇದೀಗ ಕೊರೊನಾ ಸಂಕಷ್ಟದ ನಡುವೆ ರಾಜ್ಯ ಸಭೆ ಹಾಗೂ ಪರಿಷತ್ ಚುನಾವಣೆ ಎದುರಾಗುತ್ತಿದ್ದಂತೆ ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ಆದರೆ, ಉರುಳಿದ ದಾಳ ಕತ್ತಿಯದ್ದಾದರೂ ಉರುಳಿಸಿದವರು ಮಾತ್ರ ಬಸನಗೌಡ ಪಾಟೀಲ್ ಯತ್ನಾಳ್!
ಕೇಂದ್ರದಲ್ಲಿ ಸಚಿವರಾಗಿದ್ದ ಯತ್ನಾಳ್ ಅವರನ್ನು ಯಡಿಯೂರಪ್ಪ ಮೊದಲ ಬಾರಿ ಸಿಎಂ ಆಗಿದ್ದ ವೇಳೆ 2010 ರಲ್ಲಿ ಪಕ್ಷದಿಂದ ಹೊರಹಾಕಲಾಗಿತ್ತು. 2013 ರಲ್ಲಿ ಜೆಡಿಎಸ್ ಸೇರಿ ಚುನಾವಣೆಯಲ್ಲಿ ಸೋತಿದ್ದ ಯತ್ನಾಳ್ ಅವರನ್ನು ಮರಳಿ 2013ರಲ್ಲಿ ಬಿಜೆಪಿಗೆ ಸೇರಿಸಿಕೊಳ್ಳಲಾಯಿತು. ಆದರೆ, ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿದ್ದರಿಂದ 2015 ರಲ್ಲಿ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿತ್ತು.
ಇದನ್ನೂ ಓದಿ: ನನಗೆ ಟಿಕೆಟ್ ಕೊಟ್ಟಿದ್ದು ಅಮಿತ್ ಶಾ, ಬೇರೆ ಯಾರೂ ಅಲ್ಲ: ಈಟಿವಿ ಭಾರತದ ಜೊತೆ ಯತ್ನಾಳ್ ಮಾತು
ಆದರೆ, 2018 ರಲ್ಲಿ ಮತ್ತೆ ಯತ್ನಾಳ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಯಿತು. ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ರಮೇಶ್ ಜಿಗಜಿಣಗಿ, ಅಪ್ಪುಪಟ್ಟಣ ಶೆಟ್ಟಿ ಹಾಗೂ ವಿಜಯಪುರ ಜಿಲ್ಲಾ ಬಿಜೆಪಿ ಮುಖಂಡರ ನಡುವೆಯೂ ಅಂದು ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದರು. ಪಕ್ಷಕ್ಕೆ ಸೇರಿಸಿಕೊಳ್ಳಯವ ನಿರ್ಧಾರಕ್ಕೆ ಬಂದಿದ್ದರು. ಈ ಸಂಬಂಧ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ 2018 ರ ಮಾ. 24 ರಂದು ರಾಜ್ಯದ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯೆಲ್, ರಾಜ್ಯದ ಉಸ್ತುವಾರಿ ಮುರುಳೀಧರರಾವ್ ಹಾಗೂ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಯಡಿಯೂರಪ್ಪ ಸಭೆ ನಡೆಸಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಿಜೆಪಿ ಸೇರ್ಪಡೆ ನಿರ್ಧಾರ ಪ್ರಕಟಿಸಿದ್ದರು. ಅದರಂತೆ 2018 ರ ಏ. 4 ರಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಯತ್ನಾಳ್ ಮರಳಿ ಮಾತೃ ಪಕ್ಷಕ್ಕೆ ಸೇರಿದ್ದರು.
ಯಡಿಯೂರಪ್ಪ ಕೊಟ್ಟ ಮಾತಿನಂತೆ ವಿಜಯಪುರ ಟಿಕೆಟ್ ನೀಡಲಾಯಿತು. 72 ಜನರ ಮೊದಲ ಪಟ್ಟಿಯಲ್ಲೇ ಯತ್ನಾಳ್ ಹೆಸರು ಇತ್ತು. ಬಿಜೆಪಿಗೆ ವಾಪಸ್ ಕರೆತರುವಲ್ಲಿ, ಟಿಕೆಟ್ ಕೊಡಿಸುವಲ್ಲಿ ತಮ್ಮದೇ ನಿರ್ಣಾಯಕ ಪಾತ್ರ ಇದ್ದರೂ ಈಗ ತಮ್ಮ ವಿರುದ್ದವೇ ತಿರುಗಿಬಿದ್ದಿರುವ ಯತ್ನಾಳ್ ನಡೆಗೆ ಸಿಎಂ ತೀವ್ರ ಅಸಮಧಾನಗೊಂಡಿದ್ದಾರೆ. ನಮ್ಮವರೆಂದುಕೊಂಡವರೇ ನಮಗೆ ಸಂಕಷ್ಟ ತರುತ್ತಿದ್ದಾರೆಂದು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಯತ್ನಾಳ್ ನೇತೃತ್ವದಲ್ಲಿ ಬಂಡಾಯ ಚಟುವಟಿಕೆ ನಡೆಯುವ ಮುನ್ಸೂಚನೆ ಅರಿತ ಸಿಎಂ, ಅವರನ್ನು ಕರೆಸಿ ಮಾತುಕತೆ ನಡೆಸುವ ಪ್ರಯತ್ನ ನಡೆಸಿದರು.
ಇದನ್ನೂ ಓದಿ: ಊಟ ಮಾಡಿದ್ದೇವೆ, ಸಭೆ ನಡೆಸಿಲ್ಲ, ಬಂಡಾಯವೂ ಇಲ್ಲ: ಕತ್ತಿ ಸ್ಪಷ್ಟನೆ
ನಾಲ್ಕು ದಿನದ ಹಿಂದೆ ಸಮಯ ನೀಡಿ ಕಾವೇರಿ ನಿವಾಸದಲ್ಲಿ ಕಾದು ಕುಳಿತರು. ಆದರೆ 1 ಗಂಟೆ ಕಾದರೂ ಯತ್ನಾಳ್ ಬರಲಿಲ್ಲ, ಯತ್ನಾಳ್ ವರ್ತನೆಗೆ ಸಿಎಂ ಕುಪಿತಗೊಂಡಿದ್ದರು. ನಂತರ ನಿನ್ನ ಮತ್ತೆ ಆಹ್ವಾನ ನೀಡಿ ಮಾತುಕತೆಗೆ ಕರೆದಿದ್ದರು. ಆದರೆ, ನಿನ್ನೆಯೂ ಗೈರಾಗಿ ರೆಬಲ್ ಚಟುವಟಿಕೆ ನಡೆಸಿದ್ದಾರೆ. ವಿರೋಧದ ನಡುವೆಯೂ ಪಕ್ಷಕ್ಕೆ ಸೇರಿಸಿಕೊಂಡು ನಮ್ಮವರೂ ಎಂದುಕೊಂಡವರಿಂದಲೇ ಇಂತಹ ಸಂಕಷ್ಟಕ್ಕೆ ಸಿಲುಕಬೇಕಾಯಿತು ಎಂದು ಸಿಎಂ ಇದೀಗ ಪರಿತಪಿಸುತ್ತಿದ್ದಾರೆ.
ಪ್ರಸ್ತುತ ಈ ಬಂಡಾಯದ ಚಟುವಟಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಎಲ್ಲವನ್ನೂ ಹೈಕಮಾಂಡ್ ಗಮನಕ್ಕೆ ತರಲು ಸಿಎಂ ಚಿಂತನೆ ನಡೆಸಿದ್ದಾರೆ. ರೆಬಲ್ಗಳು ಮುಂದುವರೆದರೆ ಸರ್ಕಾರ ಉಳಿಸಿಕೊಳ್ಳಲು ಯಾವ ರೀತಿ ದಾಳ ಉರುಳಿಸಬೇಕು ಎನ್ನುವ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ರಚಿಸಲು ಬಳಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಎನ್ನುವ ಟ್ರಂಪ್ ಅನ್ನೇ ಸರ್ಕಾರ ಉಳಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಸಧ್ಯ ಎಲ್ಲವೂ ಸರಿ ಇದೆ ಎಂದು ಅಂದುಕೊಂಡರೂ ಬಿಜೆಪಿಯಲ್ಲಿ ಬಂಡಾಯ ಸ್ಫೋಟಿಸಿ ಸರ್ಕಾರ ಪತನದ ಅಂಚಿಗೆ ಬಂದರೆ ಮತ್ತೊಮ್ಮೆ ಆಪರೇಷನ್ ಕಮಲ ಮಾಡಿಯಾದರೂ ಸರ್ಕಾರ ಉಳಿಸಿಕೊಳ್ಳಬೇಕು ಎನ್ನುವ ಚಿಂತನೆಯನ್ನು ಸಿಎಂ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮಾಧ್ಯಮದವರ ಕಣ್ತಪ್ಪಿಸಿ ಮನೆಯಿಂದ ಹೊರ ಹೋದ ರಮೇಶ್ ಕತ್ತಿ!
ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೆಲ್ಲಾ ಭಿನ್ನಮತೀಯ ಚಟುವಟಿಕೆ ಸಹಜ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಹೈಕಮಾಂಡ್ ರಂಗಪ್ರವೇಶ ಮಾಡಲಿದೆಯಾ ಅಥವಾ ಸಿಎಂ ಯಡಿಯೂರಪ್ಪನವರೇ ಪರಿಸ್ಥಿತಿ ನಿಭಾಯಿಸಲಿದ್ದಾರಾ ಕಾದು ನೋಡಬೇಕಿದೆ.