ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಿನ್ನೆ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಅಗೌರವವನ್ನುಂಟು ಮಾಡಿದ ಆರೋಪದ ಮೇಲೆ ವಕ್ತಾರ ಕೆ.ಹೆಚ್.ಕುಮಾರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಜೆಡಿಎಸ್ ಕಚೇರಿಯಲ್ಲಿ ನಿನ್ನೆ ಬೆಂಗಳೂರು ನಗರದ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಸಭೆ ನಡೆಯುತ್ತಿದ್ದ ವೇಳೆ ಅನಗತ್ಯವಾಗಿ ಮಧ್ಯ ಪ್ರವೇಶಿಸಿ ಮೈಕ್ನನ್ನು ಕಸಿದುಕೊಳ್ಳಲು ಕುಮಾರ್ ಪ್ರಯತ್ನಪಟ್ಟಿದ್ದು, ಈ ನಡವಳಿಕೆ ಕಾರ್ಯಕರ್ತರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಇದೆ. ಜೊತೆಗೆ ದೇವೇಗೌಡರು ಸೇರಿದಂತೆ ಇತರ ನಾಯಕರಿಗೆ ಅಗೌರವವನ್ನುಂಟು ಮಾಡಿದ್ದಾರೆ.
ಸಭೆ ಮುಗಿದ ಮೇಲೂ ಸಹ ಕುಮಾರ್ ಮಾಧ್ಯಮಗಳ ಸಮ್ಮುಖದಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಅವರನ್ನು ಅಡ್ಡಗಟ್ಟಿ ತುಂಬಾ ಜೋರು ಧ್ವನಿಯಲ್ಲಿ ಅಸಂಬದ್ಧವಾದ ಪ್ರಶ್ನೆಗಳನ್ನು ಕೇಳಿ ಪಕ್ಷದ ಕಚೇರಿಯ ಇಡೀ ವಾತಾವರಣವನ್ನೇ ಕಲುಷಿತಗೊಳಿಸಿದ್ದರು ಎನ್ನಲಾಗಿದೆ.
ಈ ಎಲ್ಲ ನಡವಳಿಕೆಗಳನ್ನು ಖಂಡಿಸಿರುವ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಈ ಕೂಡಲೇ ಅವರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಏಳು ದಿನಗಳೊಳಗೆ ನಿನ್ನೆಯ ಘಟನೆ ಕುರಿತು ಲಿಖಿತ ರೂಪದ ಮೂಲಕ ಸೂಕ್ತ ಸಮಜಾಯಿಷಿ ನೀಡಬೇಕೆಂದು ಸೂಚಿಸಿರುವ ಅವರು, ಇದಕ್ಕೆ ತಪ್ಪಿದ್ದಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.