ಬೆಂಗಳೂರು: ಲೋಕಸಭಾ ಸದಸ್ಯರಾಗಿರುವ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ರೇವಣ್ಣ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಚುನಾವಣಾ ಆಯೋಗಕ್ಕೆ ಪ್ರಜ್ವಲ್ ರೇವಣ್ಣ ತಾವು ಹೊಂದಿರುವ ಆಸ್ತಿ ಕುರಿತಂತೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಸಂಸದರಾಗಿ ಚುನಾಯಿತರಾಗಿರುವ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ವಕೀಲ ದೇವರಾಜೇಗೌಡ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ:ಸಂಸದ ಪ್ರಜ್ವಲ್ ಆಯ್ಕೆ ಅಸಿಂಧು ಕೋರಿದ್ದ ಅರ್ಜಿ ವಜಾ
ಈ ವೇಳೆ ಪ್ರಜ್ವಲ್ ಪರ ವಾದಿಸಿದ ವಕೀಲ ಕೇಶವ ರೆಡ್ಡಿ ಅವರು, ಅರ್ಜಿದಾರರು ಸಲ್ಲಿಸಿರುವ ರಿಟ್ ಪರಿಪೂರ್ಣವಾಗಿಲ್ಲ. ಈ ಲೋಪದೋಷಗಳನ್ನು ಹೈಕೋರ್ಟ್ ಕಚೇರಿ ನೀಡಿದ್ದ ಕಾಲ ಮಿತಿಯಲ್ಲಿ ಸರಿಪಡಿಸಿಲ್ಲ. ಹೀಗಾಗಿ ಕ್ರಮಬದ್ಧವಾಗಿಲ್ಲದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು. ಮನವಿ ಪುರಸ್ಕರಿಸಿದ ಪೀಠ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶಿತು.
ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರು ವಾಸ್ತವವಾಗಿ ಹೊಂದಿರುವ ಆಸ್ತಿಗಿಂತಲೂ ಕಡಿಮೆ ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿಯುಳ್ಳ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದ ವಕೀಲ ದೇವರಾಜೇಗೌಡ, ಹೈಕೋರ್ಟ್ ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವ ಪ್ರಜ್ವಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿದ್ದರು. ಆದರೆ ಅರ್ಜಿಯಲ್ಲಿದ್ದ ಲೋಪದೋಷಗಳನ್ನು ಹೈಕೋರ್ಟ್ ಕಚೇರಿ ತೋರಿಸಿದ ನಂತರವೂ ಕಾಲಮಿತಿಯಲ್ಲಿ ಅವುಗಳನ್ನು ಸರಿಪಡಿಸುವ ಕೆಲಸ ಮಾಡಿರಲಿಲ್ಲ. ಹೀಗಾಗಿ ಪೀಠ ತಕರಾರು ಅರ್ಜಿ ವಜಾಗೊಳಿಸಿದೆ. ಇದೇ ರೀತಿ ಪ್ರಜ್ವಲ್ ಆಯ್ಕೆ ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎ. ಮಂಜು ಸಲ್ಲಿಸಿದ್ದ ಅರ್ಜಿ ಕೂಡ ಅದರಲ್ಲಿನ ಲೋಪದೋಷಗಳಿಂದಾಗಿಯೇ ವಜಾಗೊಂಡಿತ್ತು. ಎರಡು ಅರ್ಜಿಗಳು ವಜಾಗೊಂಡ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರ ಸಂಸದ ಹುದ್ದೆ ಅಭಾದಿತವಾಗಿದೆ.