ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಹೈಕಮಾಂಡ್ ಜೊತೆ ವಿಸ್ತೃತ ಚರ್ಚೆ ನಡೆದಿದ್ದು, ಕಳೆದ ಬಾರಿಗಿಂತ ಎರಡು ಹೆಜ್ಜೆ ಮುಂದೆ ಹೋಗಿದ್ದೇವೆ. ಸಂಪುಟ ವಿಸ್ತರಣೆ ವಿಷಯ ಅಂತಿಮ ಹಂತಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಒಂದು ಪ್ರಕ್ರಿಯೆ, ಇದೀಗ ಈ ವಿಷಯದಲ್ಲಿ ಕಳೆದ ಬಾರಿಗಿಂತ ಎರಡು ಹೆಜ್ಜೆ ಮುಂದೆ ಹೋಗಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ ಎಲ್ಲ ಆಯಾಮಗಳನ್ನು ಗಮನದಲ್ಲಿರಿಸಿಕೊಂಡು ಹೈಕಮಾಂಡ್ ನಾಯಕರು ನಮಗೆ ಮಾರ್ಗದರ್ಶನ ಮಾಡಲಿದ್ದಾರೆ. ಈಗ ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ಅಂತಿಮ ಘಟ್ಟಕ್ಕೆ ಬಂದಿದ್ದೇವೆ. ಯಾವಾಗ ಆಗಲಿದ್ಯೋ ನಿಮಗೆ ತಿಳಿಸುತ್ತೇನೆ ಎಂದರು.
ಜನವರಿಯಿಂದ ನಮ್ಮ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಹಲವಾರು ನಾಯಕರ ಪ್ರವಾಸ ಆರಂಭವಾಗಲಿದೆ. ಅದರ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ, ಚುನಾವಣಾ ಸಿದ್ಧತೆ ಕುರಿತೂ ಚರ್ಚೆ ಆಗಿದೆ. ಕೆಲವರು ಪಕ್ಷಕ್ಕೆ ಬರುವ ಬಗ್ಗೆಯೂ ಚರ್ಚೆ ನಡೆದಿದೆ ಅವರ ಬಗ್ಗೆ ವಿವರ ನೀಡಿದ್ದೇನೆ. ಕೆಲವರ ಬಳಿ ಅವರೇ ನೇರವಾಗಿ ಮಾತನಾಡಲಿದ್ದಾರೆ ಎಂದರು.
ಡಿಸೆಂಬರ್ 30ಕ್ಕೆ ರಾಜ್ಯಕ್ಕೆ ಅಮಿತ್ ಶಾ: ಡಿ.30 ಅಮಿತ್ ಶಾ ರಾಜ್ಯಕ್ಕೆ ಬರಲು ತೀರ್ಮಾನಿಸಿದ್ದಾರೆ. ಮಂಡ್ಯದಲ್ಲಿ ಅವರ ಕಾರ್ಯಕ್ರಮ ಇದೆ. ಬೆಂಗಳೂರಿನಲ್ಲಿಯೂ ಒಂದು ಕಾರ್ಯಕ್ರಮ ಇದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿ ದೆಹಲಿಗೆ ವಾಪಸ್ ಆಗಲಿದ್ದಾರೆ ಎಂದರು.
ಮೀಸಲಾತಿ ಬಗ್ಗೆಯೂ ಚರ್ಚೆ: ಪಂಚಮಸಾಲಿ ಮೀಸಲಾತಿ ಹೋರಾಟ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿದ್ದು, ಮೀಸಲಾತಿ ವಿಷಯ ಜಟಿಲವಾದ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿ ಸಲಹೆ ಪಡೆದುಕೊಂಡಿದ್ದಾರೆ. ಸರ್ವಪಕ್ಷ ಸಭೆ ನಂತರ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಿಲುವು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ನಡ್ಡಾಗೆ ಮೀಸಲಾತಿ ಬಗ್ಗೆ ವಿವರ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಲಾಯಿತು. ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದಲ್ಲಿ ಪ್ರಮುಖವಾಗಿರುವ ಮೀಸಲಾತಿ ವಿಚಾರದ ಬಗ್ಗೆ ಏನಾಗುತ್ತಿದೆ ಎನ್ನುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಯಾರು ಯಾರಿಗೆ ನ್ಯಾಯ ಕೊಡಲು ಸಾಧ್ಯವೊ ಎಲ್ಲರಿಗೂ ನ್ಯಾಯ ಕೊಡಿ, ನಮ್ಮ ಪಕ್ಷದ ನೀತಿಯಂತೆ ಸಾಮಾಜಿಕ ನ್ಯಾಯದ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ. ಮೀಸಲಾತಿ ವಿಷಯದ ಕುರಿತು ಎಲ್ಲ ವಿವರಗಳನ್ನೂ ನಾನು ನಡ್ಡಾ ಅವರಿಗೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯದ ಅಡಿ ಮೀಸಲಾತಿ ತೀರ್ಮಾನ: ಮೀಸಲಾತಿ ಕುರಿತು ಯಾವ ಭಾಗಕ್ಕೆ ಎಷ್ಟಿದೆ ಯಾವ ಸಮಾಜಕ್ಕಿದೆ ಎನ್ನುವ ಎಲ್ಲ ವಿವರ ಪಡೆದಿದ್ದಾರೆ. ಅತಿ ಶೀಘ್ರದಲ್ಲಿ ಈ ಬಗ್ಗೆ ತಿಳಿಸುತ್ತೇವೆ ಎಂದಿದ್ದಾರೆ. ಮೀಸಲಾತಿ ಕುರಿತು ಈಗಾಗಲೇ ವರದಿ ಬಂದಿದೆ. ಸರ್ಕಾರ ಇನ್ನು ತನ್ನ ನಿಲುವು ಪ್ರಕಟ ಮಾಡಿಲ್ಲ. ಪ್ರಕಟ ಮಾಡುವ ಮೊದಲು ಸರ್ವ ಪಕ್ಷ ಸಭೆ ಕರೆದು ಸುದೀರ್ಘವಾಗಿ ಚರ್ಚೆ ನಡೆಸಲಾಗುತ್ತದೆ.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರವಿದೆ, ಹಲವಾರು ಆಯಾಮಗಳು ಇದರಲ್ಲಿ ಇವೆ. ಹಾಗಾಗಿ ಸೂಕ್ಷ್ಮ ಮೀಸಲಾತಿಯನ್ನು ಮಾಡುವ ವೇಳೆ ಬೇಡಿಕೆ ಇರಿಸುವವರಿಗೆ ನ್ಯಾಯ ಕೊಡುವುದು ಒಂದೆಡೆಯಾದರೆ ಈಗಾಗಲೇ ಮೀಸಲಾತಿ ಪಡೆಯುತ್ತಿರುವವರಿಗೆ ಅನ್ಯಾಯ ಆಗಬಾರದು ಎನ್ನುವುದು ಮತ್ತೊಂದೆಡೆ ಇದೆ. ಹಾಗಾಗಿ ಸಾಮಾಜಿಕ ನ್ಯಾಯದ ಅಡಿ ತೀರ್ಮಾನ ಮಾಡಲಾಗುತ್ತದೆ ಎಂದರು.
ಮೀಸಲಾತಿ ವಿಚಾರದಲ್ಲಿ ವೈಜ್ಞಾನಿಕವಾಗಿ ಹೋದಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ ಆ ನಿಟ್ಟಿನಲ್ಲಿ ನಾವು ಮುಂದಿನ ಹೆಜ್ಜೆ ಇರಿಸಲಿದ್ದೇವೆ. ಈಗಾಗಲೇ ತಜ್ಞರು ಹಲವಾರು ಆಯಾಮಗಳನ್ನು ವರದಿಯಲ್ಲಿ ಕೊಟ್ಟಿದ್ದಾರೆ. ಇನ್ನಷ್ಟು ಆಯಾಮದ ಕುರಿತು ಹೊರಗಡೆ ಚರ್ಚೆ ನಡೆಸಲಾಗುತ್ತದೆ. ಸರ್ವ ಪಕ್ಷದ ಸಭೆಯಲ್ಲಿ ಈ ವಿಚಾರವನ್ನು ಇಟ್ಟು ಸರ್ವಾನುಮತದ ನಿರ್ಣಾಯಕಗೊಳ್ಳುತ್ತೇವೆ.
ಬೆಳಗಾವಿಗೆ ವಾಪಸ್ ಆದ ಕೂಡಲೇ ಸಚಿವರ ಜೊತೆ ಚರ್ಚಿಸಲಾಗುತ್ತದೆ. ನಂತರ ಸರ್ವಪಕ್ಷ ಸಭೆ ಕರೆದು ಅವರ ಜೊತೆ ಮೀಸಲಾತಿ ವಿಷಯದ ಕುರಿತು ಚರ್ಚೆ ನಡೆಸಲಾಗುತ್ತದೆ. ಬಳಿಕವೇ ಸರ್ಕಾರ ತನ್ನ ನಿಲುವನ್ನ ಪ್ರಕಟಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಆರ್ಥಿಕತೆ ಮೇಲೆ ಪರಿಣಾಮ ಬೀರದ ರೀತಿ ಕೆಲವು ನಿಯಮ ಜಾರಿ: ಸಿಎಂ ಬೊಮ್ಮಾಯಿ