ಬೆಂಗಳೂರು : ಉಪನಗರ ರೈಲ್ವೆ ಯೋಜನೆಗೆ ಕೇಂದ್ರದ ಮಾಜಿ ಸಚಿವ ದಿ. ಅನಂತ್ ಕುಮಾರ್ ಹೆಸರಿಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ಕುರಿತು ನಿರ್ಧರಿಸಲಾಗುತ್ತದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋಪಿನಾಥ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಪನಗರ ರೈಲು ಯೋಜನೆ 5.5 ಸಾವಿರ ಕೋಟಿಯಿಂದ 15 ಸಾವಿರ ಕೋಟಿಗೆ ಹೋಗಿದೆ. ನಾಲ್ಕು ಭಾಗವಾಗಿ ಯೋಜನೆಯನ್ನು ವಿಂಗಡಿಸಲಾಗಿದೆ. ಇದರಲ್ಲಿ ಮೊದಲ ಕಾರಿಡಾರ್ 41ಕಿ.ಮೀ ಬೆಂಗಳೂರಿನಿಂದ ದೇವನಹಳ್ಳಿಗೆ ಇದ್ದು, ಬೈಯಪ್ಪನಹಳ್ಳಿ-ಚಿಕ್ಕಬಾಣಾವರಮ, ಕೆಂಗೇರಿ- ವೈಟ್ ಫೀಲ್ಡ್, ಹೀಲಲಿಗೆ-ರಾಜಾನಕುಂಟೆ ವಲಯ ಸೇರಿ 147 ಕಿ.ಮೀ ವ್ಯಾಪ್ತಿಯ ದೊಡ್ಡ ಯೋಜನೆ ಇದಾಗಿದೆ.
ಮೊದಲ ಯೋಜನೆ ಶಂಕುಸ್ಥಾಪನೆ ಪ್ರಧಾನಿ ಮೋದಿ ನೆರವೇರಿಸಿದ್ದು, ಈಗ ಬೈಯಪ್ಪನಹಳ್ಳಿ, ಚಿಕ್ಕಬಾಣಾವರ ಎರಡನೇ ಕಾರಿಡಾರ್ ಕೈಗೆತ್ತಿಕೊಂಡಿದ್ದೇವೆ. ಇದಕ್ಕೆ 85 ಪರ್ಸೆಂಟ್ ಜಾಗವನ್ನು ವಶಕ್ಕೆ ಪಡೆಯಲಾಗಿದೆ.
ಎರಡು ಮತ್ತು ಮೂರನೇ ಹಂತಕ್ಕೆ ಟೆಂಡರ್ : ರಾಜ್ಯ ಸರ್ಕಾರ 600 ಕೋಟಿ ಬಿಡುಗಡೆ ಮಾಡಿದೆ. ಶೇ.20-20 ಕೇಂದ್ರ ಮತ್ತು ರಾಜ್ಯದ ಪಾಲಾಗಿದ್ದು, ಉಳಿದ ಶೇ. 60 ರಷ್ಟು ಪಾಲನ್ನು ಸಾಲಸೌಲಭ್ಯದ ಮೂಲಕ ಪಡೆದುಕೊಳ್ಳಲಾಗುತ್ತದೆ. ಮೊದಲ ಹಂತದ ಸಿವಿಲ್ ಕಾಮಗಾರಿ ಆರಂಭಿಸಿದ್ದು, ಎರಡನೇ ಹಂತದ ಟೆಂಡರ್ ಸಧ್ಯದಲ್ಲೇ ಆರಂಭಿಸಲಾಗುತ್ತದೆ. ಇನ್ನು, ಮೂರನೇ ಹಂತದ ಟೆಂಡರ್ ಕರೆಯುವ ಕುರಿತು ಕೇಂದ್ರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದರು.
ಪಾರದರ್ಶಕತೆ : ಈ ಯೋಜನೆ ಮುಗಿದರೆ 10 ಲಕ್ಷ ಜನ ಸಂಚಾರ ಮಾಡಲಿದ್ದಾರೆ. ಇದು ದೊಡ್ಡ ಕನಸಾಗಿದೆ, ಪಾರದರ್ಶಕವಾಗಿ ಇರಬೇಕು ಎಂದು ಯೋಜನೆ ರೂಪುರೇಷೆ ವೆಬ್ ಸೈಟ್ನಲ್ಲಿ ಹಾಕಲಾಗಿದೆ ಎಂದರು.
ಅನಂತ್ ಕುಮಾರ್ ಹೆಸರು : ಈ ಯೋಜನೆ ಅನಂತ್ ಕುಮಾರ್ ಕನಸು, ಅವರ ಹೆಸರನ್ನು ಉಪನಗರ ರೈಲ್ವೆಗೆ ಇಡುವ ಕುರಿತು ಸಿಎಂ ಜೊತೆ ಚರ್ಚಿಸಿ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ. ನಾಳೆ ಅನಂತ್ ಕುಮಾರ್ ಅವರ 63 ನೇ ಜನ್ಮದಿನ ಎಂದು ನೆನೆದ ಅವರು ಈ ಹಿಂದೆ ಹುಟ್ಟುಹಬ್ಬಕ್ಕೆ ಫೋನ್ ಮಾಡಿ ವಿಷ್ ಮಾಡಿದ್ದೆ. ಅವರ ಕೊನೆಯ ದಿನದ ನೋವುಗಳನ್ನು ಯಾರೊಂದಿಗೂ ಅವರು ಹಂಚಿಕೊಳ್ಳಲಿಲ್ಲ ಎಂದು ಅವರ ಸೇವೆ ಸ್ಮರಿಸಿದದರು.
ಮುಂದಿನ ತಿಂಗಳು ರಾಯಚೂರು ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ : ರಾಯಚೂರು ವಿಮಾನ ನಿಲ್ದಾಣ ಯೋಜನೆಯಾಗಿ ಉಳಿಯದೆ ಕಾರ್ಯಗತವಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಶರಣಗೌಡ ಬಯ್ಯಾಪುರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ಇನ್ನು 22.13 ಎಕರೆ ಸ್ವಾಧೀನಕ್ಕೆ ಬಾಕಿ ಇದೆ. ಆ ಜಾಗದಲ್ಲಿ ಮನೆ ಕಟ್ಟಿದ್ದಾರೆ, ಅವರನ್ನೂ ಮಾನವೀಯತೆಯಿಂದ ಪರಿಗಣಿಸಲು ಸಿಎಂ ಸೂಚನೆ ನೀಡಿದ್ದರಿಂದ ಆ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.
ಯೋಜನೆಗೆ 185 ಕೋಟಿ ಇತ್ತು, ಈಗ 219 ಕೋಟಿ ಆಗಿದೆ. ಈಗಾಗಲೇ ಯೋಜನೆಗೆ ಆಡಳಿತಾತ್ಮಕ ಅನುಮೋದನೆಯಾಗಿದೆ. ಟೆಂಡರ್ ಕರೆದು ಮುಂದಿನ ತಿಂಗಳು ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಯೋಜನೆ ಯೋಜನೆಯಾಗಿರದೆ ಕಾರ್ಯಗತವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ : ನಮ್ಮ ಅವಧಿಯದ್ದೂ ಸೇರಿಸಿ ಎಲ್ಲ ನೇಮಕಾತಿಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ