ಬೆಂಗಳೂರು: ಪಶುಸಂಗೋಪನಾ ಇಲಾಖೆಯಲ್ಲಿ ನಡೆದಿರುವ ನಕಲಿ ನೇಮಕಾತಿ ಪ್ರಕರಣ ವಿಧಾನಪರಿಷತ್ನಲ್ಲಿ ಪ್ರತಿಧ್ವನಿಸಿತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿಗೂ ವೇದಿಕೆಯಾಯಿತು. ಅಂತಿಮವಾಗಿ ಸಮಗ್ರ ಚರ್ಚೆಗೆ ಅವಕಾಶ ಕಲ್ಪಿಸುವ ಭರವಸೆ ಮೂಲಕ ಗದ್ದಲಕ್ಕೆ ತೆರೆ ಎಳೆಯಲಾಯಿತು.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ನಕಲಿ ನೇಮಕಾತಿ ಕುರಿತು ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್, ನಕಲಿ ನೇಮಕಾತಿ ಆದೇಶ ನೀಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದರು.
ಸಚಿವರ ಉತ್ತರಕ್ಕೆ ತೃಪ್ತರಾಗದ ಸದಸ್ಯ ಅರಳಿ, ಸಚಿವರ ಆಪ್ತ ಸಹಾಯಕ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು. ಈ ಆರೋಪವನ್ನು ಸಚಿವರು ನಿರಾಕರಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಸಚಿವರ ಪಿಎ ಎನ್ನಲು ದಾಖಲೆ ಇದೆಯಾ ಎಂದು ಪ್ರಶ್ನಿಸಿದರು. ಅದಕ್ಕೆ ಸದಸ್ಯ ಅರಳಿ, ನೀವು ಒನ್ ಸೈಡ್ ಕೆಲಸ ಮಾಡಬೇಡಿ ಎಂದು ಸಭಾಪತಿಗಳ ವಿರುದ್ಧ ಆರೋಪ ಮಾಡಿದರು.
ಇದಕ್ಕೆ ಸಭಾಪತಿ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೆ, ಬಿಜೆಪಿ ಸದಸ್ಯರು ಕಿಡಿಕಾರಿದರು, ಇದರಿಂದ ಸದನದಲ್ಲಿ ಗದ್ದಲವೆದ್ದಿತು. ಮಾತಿನ ಚಕಮಕಿ ನಡೆಯಿತು. ಆಗ ಸಭಾಪತಿ ಎದ್ದು ನಿಂತು ಪರಿಸ್ಥಿತಿ ನಿಯಂತ್ರಣ ಮಾಡಿದರು. ನಂತರ ಪತ್ರಿಕಾ ಹೇಳಿಕೆ ನೋಡಿ ಸದನದಲ್ಲಿ ಪ್ರಶ್ನಿಸಿದ್ದೀರಾ? ಸಚಿವರ ಆರೋಪಿ ಪಿಎ ಎಂದಿದ್ದೀರಿ. ಅದಕ್ಕೆ ದಾಖಲೆ ಕೊಡಿ ಎಂದು ಸೂಚಿಸಿದರು.
ನಂತರ ಬಿಜೆಪಿ ಸದಸ್ಯ ಪ್ರಾಣೇಶ, ಸಭಾಪತಿ ಪೀಠಕ್ಕೆ ಸದಸ್ಯ ಅರಳಿ ಅವಮಾನ ಮಾಡಿದ್ದು ಕೂಡಲೇ ಅವರು ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ದನಿಗೂಡಿಸಿದರು. ನಂತರ ಅರಳಿ, ಹೇಳಿಕೆ ವಾಪಸ್ ಪಡೆಯುವುದಾಗಿ ಪ್ರಕಟಿಸಿದರು. ನಂತರ ಸಚಿವರೇ ಮಾಧ್ಯಮಗಳ ಮುಂದೆ ಉದ್ಯೋಗ ಕೊಡಿಸುವುದಾಗಿ ನನ್ನ ಆಪ್ತ ಸಹಾಯಕ ಹಣ ಕೇಳುತ್ತಿದ್ದಾರೆ. ಯಾರೂ ಕೊಡಬೇಡಿ ಎಂದು ಹೇಳಿದ್ದರು. 90 ಜನರಿಂದ ಉದ್ಯೋಗ ಕೊಡಿಸುವ ಭರವಸೆ ನೀಡಿ ಹಣ ಪಡೆದಿದ್ದಾರೆ, ಸಚಿವರು ಯಾಕೆ ದೂರು ಕೊಡಲಿಲ್ಲ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಚವ್ಹಾಣ್, ನನಗೆ ಪಿಎ ಇಲ್ಲ, ನನ್ನ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರ, ದುರುಪಯೋಗ ಪಡಿಸಿಕೊಂಡ ಕೂಡಲೇ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಈ ವೇಳೆ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಪತ್ರಿಕೆಯಲ್ಲಿ ಬಂದಿರುವುದನ್ನು ಸುಳ್ಳು ಎಂದರೆ ಹೇಗೆ? ಎಂದು ಪ್ರಶ್ನಿಸಿದರು. ಈ ವೇಳೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಪ್ರಶ್ನೋತ್ತರದಲ್ಲಿ ಉತ್ತರ ತೃಪ್ತಿ ತರದೇ ಇದ್ದಲ್ಲಿ ಬೇರೆ ರೂಪದಲ್ಲಿ ತನ್ನಿ ಎಂದು ಸಲಹೆ ನೀಡಿದರು. ನಂತರ ಸಭಾಪತಿ ಮಲ್ಕಾಪುರೆ ಉತ್ತರ ತೃಪ್ತಿ ತರದಿದ್ದಲ್ಲಿ ಬೇರೆ ರೂಪದಲ್ಲಿ ನೋಟಿಸ್ ಕೊಡಿ, ಚರ್ಚೆಗೆ ಅವಕಾಶ ಕೊಡಲಾಗುತ್ತದೆ ಎಂದು ರೂಲಿಂಗ್ ನೀಡಿ ಚರ್ಚೆಗೆ ತೆರೆ ಎಳೆದರು.
ಹಿಂದಿ ಹೇರಿಕೆ ವಿರೋಧಿಸಿ ಜೆಡಿಎಸ್ ಗದ್ದಲ: ವಿಧಾನಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಜೆಡಿಎಸ್ ಸದಸ್ಯರು ಸದನದಲ್ಲಿ ಹಿಂದಿ ಹೇರಿಕೆ ಖಂಡಿಸಿ ಘೋಷಣೆ ಕೂಗಿದರು. ಜೆಡಿಎಸ್ ಸದಸ್ಯ ಶರವಣ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದರು. ಇದಕ್ಕೆ ದನಿಗೂಡಿಸಿ ಜೆಡಿಎಸ್ ಸದಸ್ಯರು ಹಿಂದಿ ದಿವಸ್ ವಿರುದ್ಧ ಘೋಷಣೆ ಕೂಗಿದರು. ಕನ್ನಡ ಧ್ವಜದ ಶಾಲು ಧರಿಸಿ ಕಲಾಪಕ್ಕೆ ಆಗಮಿಸಿದ್ದ ಸದಸ್ಯರು ಬಾರಿಸು ಕನ್ನಡ ಡಿಂಡಿಮವಾ ಹಾಡನ್ನು ಮೊಳಗಿಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಕೂಡ ಹಿಂದಿ ಭಾಷೆ ರಾಷ್ಟ್ರೀಯ ಭಾಷೆ ಅಲ್ಲ ಎಂದು ಹಿಂದಿ ದಿವಸ್ ವಿರೋಧಿಸಿದರು. ಈ ವೇಳೆ ಯಾರಿಗೂ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಗದ್ದಲಕ್ಕೆ ತೆರೆ ಎಳೆದು ಪ್ರಶ್ನೋತ್ತರ ಕಲಾಪ ಆರಂಭಿಸಿದರು.
ಇದನ್ನೂ ಓದಿ: ಅಧಿವೇಶನದಲ್ಲಿ ಚರ್ಚಾ ಅಸ್ತ್ರಗಳ ಬಗ್ಗೆ ಗಂಭೀರ ಚರ್ಚೆ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ