ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿರುವ ಕುರಿತು ಪಕ್ಷದ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಿ ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರೆಡ್ಡಿ ಪಕ್ಷ ಸ್ಥಾಪನೆ ಕುರಿತು ಮೊದಲು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ ನಂತರ ಹೈಕಮಾಂಡ್ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಇಂದು ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಹೈಕಮಾಂಡ್ ನಾಯಕರ ಭೇಟಿ ಮಾಡಿದ ವೇಳೆ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿರುವ ಕುರಿತು ಮಾತುಕತೆ ನಡೆಸಿ ವಿವರ ನೀಡುವುದಾಗಿ ಹೇಳಿದ್ದಾರೆ.
ಆರಂಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ ನಂತರ ಪಕ್ಷ ಅವರನ್ನು ದೂರ ಇರಿಸಿತ್ತು. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ, ಬೇಡವಾ ಎನ್ನುವ ಚಿಂತನೆಯಲ್ಲಿ ಸಮಯ ಕಳೆಯುತ್ತಾ ಬಂದಿತ್ತು. ಬಿಜೆಪಿ ಹೈಕಮಾಂಡ್ ಜನಾರ್ದನ ರೆಡ್ಡಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿನ್ನೆಯಷ್ಟೆ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.
ಹೇಳಿದಂತೆ ಹೊಸ ಪಕ್ಷ ಘೋಷಿಸಿದ ರೆಡ್ಡಿ.. 12 ವರ್ಷಗಳ ನಂತರ ರಾಜಕೀಯ ಕ್ಷೇತ್ರಕ್ಕೆ ಮರು ಪ್ರವೇಶ ಮಾಡುವ ಸೂಚನೆ ನೀಡಿದ್ದ ಜನಾರ್ದನ ರೆಡ್ಡಿ ಭಾನುವಾರ ಮಾಧ್ಯಮಗೋಷ್ಟಿ ನಡೆಸಿ ತಮ್ಮ ಹೊಸ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದ ಮೂಲಕ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊಸ ಪಕ್ಷದ ಅಭ್ಯರ್ಥಿಯಾಗಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದಕ್ಕಾಗಿ ಗಂಗಾವತಿಯಲ್ಲೇ ಮನೆ ಮಾಡಿದ್ದು, ಅಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡಿದ್ದೇನೆ ಎಂದಿದ್ದಾರೆ.
ರೆಡ್ಡಿ ಅಳಲು, ಬಿಜೆಪಿಗೆ ಗೋಳು.. ಇದುವರೆಗೆ ಬಿಜೆಪಿ ಪಕ್ಷಕ್ಕಾಗಿ ದುಡಿದೆ ಆದರೆ ಅದರಿಂದ ನನಗೇನು ಲಾಭ ಆಗಿಲ್ಲ. 12 ವರ್ಷಗಳ ನಂತರ ಬಳ್ಳಾರಿಗೆ ಬರಲು ಕೋರ್ಟ್ ಆದೇಶ ನೀಡಿದರೂ, ಸಿಬಿಐ ಬಳಸಿ ಮತ್ತೆ ನನ್ನನ್ನು ಬಳ್ಳಾರಿಯಿಂದ ಹೊರಹಾಕಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ನಾನು ಮತ್ತೆ ಅದೇ ಪಕ್ಷದಿಂದ ಅವಕಾಶ ಸಿಗುತ್ತದೆ ಎನ್ನುವ ಆಸೆಯಲ್ಲಿರುವುದು ತಪ್ಪು. ನನ್ನ ಹಿತೈಷಿಗಳು ನನ್ನ ಬೆಂಬಲಕ್ಕಿದ್ದಾರೆ. ನಾನು ಆ ಪಕ್ಷದ ಸದಸ್ಯ ಅಲ್ಲ ಎಂದು ಹೇಳಿದರೂ ಎಲ್ಲರೂ ನಾನಿನ್ನು ಬಿಜೆಪಿ ಪಕ್ಷದ ಸದಸ್ಯ ಎಂದುಕೊಂಡಿದ್ದರು. ಆದರೆ ಅದೆಲ್ಲಕ್ಕೂ ತೆರೆ ಎಳೆಯುತ್ತಿದ್ದೇನೆ. ಇನ್ನು ಮುಂದೆ ಬಿಜೆಪಿ ಜೊತೆಗೆ ನನಗೆ ಸಂಬಂಧ ಇಲ್ಲ. ನನ್ನ ಹಿತೈಷಿಗಳ ಬೆಂಬಲದೊಂದಿಗೆ ಹೊಸ ಪಕ್ಷವನ್ನು ಪ್ರಾರಂಭಿಸಿದ್ದೇನೆ ಎಂದು ತಿಳಿಸಿದ್ದರು. ಇನ್ನು, ಸ್ವಲ್ಪ ದಿನಗಳಲ್ಲೆ ಮತ್ತೊಂದು ಮಾಧ್ಯಮಗೋಷ್ಟಿ ನಡೆಸಿ ಪಕ್ಷದ ಚಿಹ್ನೆ, ಧ್ವಜ, ಕಾರ್ಯಾಲಯ ಹಾಗೂ ಪ್ರಣಾಳಿಕೆ ಜೊತೆ ಬಹುತೇಕ ಅಭ್ಯರ್ಥಿಗಳ ಜೊತೆ ನಿಮ್ಮ ಮುಂದೆ ಬರಲಿದ್ದೇನೆ ಎನ್ನುವ ಮಾತನ್ನೂ ಹೇಳಿದ್ದಾರೆ.
ಜನಾರ್ದನ ರೆಡ್ಡಿ ಅವರಿಗೆ ಅವರದೇ ಆದ ಬೆಂಬಲಿಗರಿದ್ದು, ಕೆಲ ಭಾಗದಲ್ಲಿ ಬಿಜೆಪಿ ಮತಗಳ ವಿಭಜನೆಯಾಗುವ ಸಾಧ್ಯತೆ ಇದೆ. ಜನಾರ್ದನ ಅವರು ಬಿಜೆಪಿ ಹಾಗೂ ಇತರ ಯಾವುದೇ ಪಕ್ಷಗಳಿಂದ ಯಾರನ್ನೂ ತಮ್ಮ ಪಕ್ಷಕ್ಕೆ ಬರುವಂತೆ ಒತ್ತಾಯ ಮಾಡುವುದಿಲ್ಲ. ನನ್ನ ಕೆಲಸಗಳನ್ನು ನಂಬಿ ಬರುವವರಿದ್ದರೆ ಅವರಿಗೆ ಸ್ವಾಗತ ಎಂದಿದ್ದಾರೆ. ಕೆಲವರು ಪಕ್ಷ ತೊರೆದು ಜನಾರ್ದನ ರೆಡ್ಡಿ ಪಕ್ಷ ಸೇರುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಸಿಎಂ ಮಾತುಕತೆ ನಡೆಸಲು ತಯಾರಾಗಿದ್ದಾರೆ.
ಇದನ್ನೂ ಓದಿ: ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ!