ಬೆಂಗಳೂರು : ಪ್ರತಿ ದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅದೇ ವೇಳೆಗೆ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿರುವವರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆ ಆಗುತ್ತಿರುವುದು ಆರೋಗ್ಯ ಇಲಾಖೆಗೆ ಕೊಂಚ ನೆಮ್ಮದಿ ತರಿಸಿದೆ.
ಆಕ್ಸಿಜನ್, ರೆಮ್ಡಿಸಿವಿರ್, ಬೆಡ್ ಸಿಕ್ತಿಲ್ಲ, ಐಸಿಯು ಇಲ್ಲ, ವೆಂಟಿಲೇಟರ್ ಕೊರತೆ. ಇದು ಸಾಲದು ಎನ್ನುವಂತೆ ಬೆಡ್ ಬ್ಲಾಕಿಂಗ್ ದಂಧೆ ಕರಾಳ ಮುಖ ಅನಾವರಣದಿಂದ ತತ್ತರಿಸಿರುವ ಆರೋಗ್ಯ ಇಲಾಖೆಗೆ ಕೋವಿಡ್ ಸೋಂಕಿತರ ಡಿಸ್ಚಾರ್ಜ್ ಸಂಖ್ಯೆ ಸ್ವಲ್ಪ ನೆಮ್ಮದಿ ತಂದಿದೆ. ಆತಂಕದಲ್ಲಿದ್ದ ರಾಜ್ಯದ ಜನತೆಯಲ್ಲೂ ಸಮಾಧಾನ ಮೂಡಿಸಿದೆ.
ದಿನಾಂಕ : ಡಿಸ್ಚಾರ್ಜ್ : ಸೋಂಕಿತರು
ಏಪ್ರಿಲ್ 25 | 6982 | 34804 |
ಏಪ್ರಿಲ್ 26 | 10663 | 29744 |
ಏಪ್ರಿಲ್ 27 | 10793 | 31830 |
ಏಪ್ರಿಲ್ 28 | 11833 | 39047 |
ಏಪ್ರಿಲ್ 29 | 14142 | 35024 |
ಏಪ್ರಿಲ್ 30 | 14884 | 48296 |
ಮೇ 01 | 18341 | 40990 |
ಮೇ 02 | 21149 | 37733 |
ಮೇ 03 | 20901 | 44438 |
ಮೇ 04 | 24714 | 44631 |
ಒಟ್ಟು ಕಳೆದ 10 ದಿನಗಳ ಅಂಕಿ-ಅಂಶದ ಪ್ರಕಾರ, 3,86,537 ಹೊಸ ಪ್ರಕರಣ ಪತ್ತೆಯಾಗಿದ್ದರೆ, 1,54,402 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಅದರಲ್ಲಿಯೂ ಕಳೆದ ಐದು ದಿನಗಳಲ್ಲಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ 1 ಲಕ್ಷ.
ಕಳೆದ ಮೂರು ದಿನದಿಂದ ಪ್ರತಿ ದಿನ 20 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆ ಸೋಂಕಿತರು ಆಸ್ಪತ್ರೆಗಳಿಂದ ಮನೆಗೆ ಮರಳುತ್ತಿದ್ದಾರೆ. ಇದು ಸದ್ಯದ ಆತಂಕದ ಸನ್ನಿವೇಶದ ನಡುವೆ ಸ್ವಲ್ಪ ನೆಮ್ಮದಿ ತರುವ ವಿಚಾರ. ಮೂರೂ ಮುಕ್ಕಾಲು ಲಕ್ಷ ಹೊಸ ಕೇಸ್ ಪತ್ತೆಯಾದರೂ ಅದರಲ್ಲಿ ಶೇ.60 ರಷ್ಟು ಜನರು ಹೋಂ ಐಸೋಲೇಷನ್, ಶೇ.20-25ರಷ್ಟು ಕೋವಿಡ್ ಕೇರ್ ಸೆಂಟರ್ಗ್ಳಲ್ಲಿದ್ದಾರೆ.
ಶೇ.15-20ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹಾಗಾಗಿ, ಆಸ್ಪತ್ರೆಯಿಂದ ಸೋಂಕಿತರು ಬಿಡುಗಡೆಯಾಗುತ್ತಿರುವ ಸಂಖ್ಯೆ ಆರೋಗ್ಯ ಇಲಾಖೆಗೆ ಬಿಗ್ ರಿಲೀಫ್ ನೀಡಿದೆ. ಇಷ್ಟು ದಿನ ಕೇವಲ ಸೋಂಕಿತರ ಸಂಖ್ಯೆ ಮಾತ್ರ ಐದಂಕಿ ತಲುಪಿತ್ತು.
ಇದೀಗ ಬಿಡುಗಡೆ ಹೊಂದುವವರ ಸಂಖ್ಯೆಯೂ ಐದಂಕಿ ತಲುಪಿದೆ. ಕೊರೊನಾ ನಿಯಂತ್ರಣಕ್ಕೆ ಬರುವ ಹಾದಿ ಸನಿಹದಲ್ಲಿದೆ ಎನ್ನುವ ಹೊಸ ಭರವಸೆ ಮೂಡುವಂತೆ ಮಾಡಿದೆ.
ರಾಜ್ಯದಲ್ಲಿ ಕೊರೊನಾ ಭೀತಿಯಲ್ಲಿರುವ ಜನರಿಗೆ ಸೋಂಕಿನಿಂದ ಗುಣಮುಖರಾಗಿ ದೊಡ್ಡ ಸಂಖ್ಯೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವುದು ನಿರಾಳತೆ ತಂದಿದೆ. ಜನತೆಯಲ್ಲಿ ಸೋಂಕಿನ ಬಗ್ಗೆ ಇದ್ದ ಆತಂಕ ಅಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆತಂಕ ತರುತ್ತಿರುವ ಸಾವಿನ ಸಂಖ್ಯೆ : ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ನಡುವೆ ಕೋವಿಡ್ ಸೋಂಕಿತ ರೋಗಿಗಳ ನಿಧನದ ಸಂಖ್ಯೆ ಆತಂಕ ಮೂಡಿಸಿದೆ. ನಿನ್ನೆ ಒಂದೇ ದಿನ ಈವರೆಗಿನ ಅತ್ಯಧಿಕ 292 ಜನ ಮೃತಪಟ್ಟಿದ್ದಾರೆ.
ಕಳೆದ 10 ದಿನದಲ್ಲಿ ಬರೋಬ್ಬರಿ 2,259 ಕೋವಿಡ್ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮರಣದ ಪ್ರಮಾಣದಲ್ಲಿಯೂ ಹೆಚ್ಚಳ ಕಂಡಿದ್ದು ಶೇ.0.65ಕ್ಕೆ ಸೋಂಕಿತರ ಮರಣದ ಪ್ರಮಾಣ ತಲುಪಿದೆ.
ಕೋವಿಡ್ ರೋಗಿಗಳ ಸಾವಿನ ಅಂಕಿ-ಅಂಶದಲ್ಲಿ ಹೆಚ್ಚಳ ಕಂಡು ಬಂದಿರುವುದು ಆತಂಕಕಾರಿ ವಿಷಯ. ಯಾರೂ ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸೋಂಕಿನ ಲಕ್ಷಣ ಕಂಡ ಆರಂಭದಲ್ಲೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆ ಪಡೆದು ಅಗತ್ಯ ಔಷಧೋಪಚಾರಕ್ಕೆ ಒಳಗಾಗಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಓದಿ: ರೆಮ್ಡಿಸಿವಿರ್ ಚುಚ್ಚುಮದ್ದು ಕೋವಿಡ್ಗೆ ಜೀವರಕ್ಷಕನಾ?: ಇಲ್ಲಿದೆ ಡಾ. ಅಂಜನಪ್ಪ ಸಲಹೆ