ಬೆಂಗಳೂರು: ಕೊರೊನಾದಿಂದ ಸಾವನ್ನಪ್ಪಿದವದರ ಮೃತದೇಹಗಳ ನಿರ್ವಹಣೆ ಕುರಿತು ಸರಳೀಕೃತ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
ಮೃತದೇಹದ ಅಂತ್ಯಕ್ರಿಯೆಯನ್ನು ಧಾರ್ಮಿಕ ಆಚರಣೆಗಳೊಂದಿಗೆ ನಡೆಸಲು ಕುಟುಂಬದವರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮೃತ ದೇಹವನ್ನು ಮುಟ್ಟುವುದು, ಸ್ನಾನ ಮಾಡಿಸುವುದು, ಅಪ್ಪಿಕೊಳ್ಳುವುದನ್ನು ಮಾಡುವಂತಿಲ್ಲ. ಇನ್ನು ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ಸದಸ್ಯರು ಭಾಗಿಯಾಗುವಂತಿಲ್ಲ.
ಕುಟುಂಬಗಳು ಆಸ್ಪತ್ರೆ ನೀಡಿದ ಮೃತದೇಹದ ಬ್ಯಾಗ್ಅನ್ನು ತೆರೆಯಬಾರದು. ಮುಖದ ಬಳಿ ಅನ್ ಝಿಪ್ ಮಾಡಿ ಮುಖದ ತುದಿಯನ್ನು ವೀಕ್ಷಿಸಬಹುದೇ ವಿನಃ ಮುಟ್ಟುವಂತಿಲ್ಲ. ಚಿತೆ/ಸಮಾಧಿ ಬಳಿ ದೇಹದ ಚೀಲವನ್ನು ತೆರೆಯುವಂತಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಧಾರ್ಮಿಕ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಸ್ಮಶಾನದಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಕೈ ಶುಚಿತ್ವದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಆಸ್ಪತ್ರೆ ಸಿಬ್ಬಂದಿಗೂ ಸೂಚನೆ: ಆಸ್ಪತ್ರೆ ಸಿಬ್ಬಂದಿ ಮುಖ್ಯವಾಗಿ ಕುಟುಂಬಗಳಿಗೆ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಕೊರೊನಾದಿಂದ ಮೃತರಾದ ದೇಹಗಳನ್ನು ಘನತೆಯಿಂದ ಮೃತ ಕುಟುಂಬದವರಿಗೆ ಹಸ್ತಾಂತರಿಸಬೇಕು. ಆಸ್ಪತ್ರೆಯವರು ಕುಟುಂಬದ ಸದಸ್ಯರಿಗೆ ಆಪ್ತ ಸಮಾಲೋಚನೆ ನಡೆಸಿ, ಅವರ ಭಾವನೆಗಳನ್ನು ಗೌರವಿಸಬೇಕು.
ಮೃತದೇಹದಲ್ಲಿ ಸೋಂಕು ಇಲ್ಲದಿದ್ದರೂ ಓರಿಫಿಸ್ನಿಂದ ಬರುವ ಸ್ರವಿಕೆಗಳಲ್ಲಿ ಸಾಂಕ್ರಾಮಿಕ ಇರುತ್ತದೆ. ಅಂತ್ಯಕ್ರಿಯೆ ವೇಳೆ ಬಳಸಿದ ಪರಿಕರಗಳನ್ನು ಮುನ್ನೆಚ್ಚರಿಕೆಗಳೊಂದಿಗೆ ನಿರ್ವಹಣೆ ಮಾಡಬೇಕು. ಶೇ.1ರಷ್ಟು ಸೋಡಿಯಂ ಹೈಪೊಕ್ಲೋರಿಟ್ ದ್ರಾವಣದಿಂದ ಪರಿಕರಗಳನ್ನು ಬಳಸಬೇಕು. ಬಳಸಿದ ಉಪಕರಣಗಳನ್ನು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಅಭ್ಯಾಸಗಳಿಗೆ ಅನುಗುಣವಾಗಿ ಬಳಸಬೇಕು.
ಸೋಂಕು ನಿವಾರಕ ದ್ರಾವಣಗಳಿಂದ ಡಿಸೋನ್ಸಿಯಂಟ್ ದ್ರಾವಣಗಳನ್ನು ಬಳಸಬೇಕು. ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳ ಅನುಸಾರ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಇದೇ ರೀತಿ ಸ್ಮಶಾನ, ಆರೋಗ್ಯ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಮಾರ್ಗಸೂಚಿಯಲ್ಲಿ ವಿವರಣೆಯಾಗಿ ತಿಳಿಸಲಾಗಿದೆ.