ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯನವರು ಎಲ್ಲಿ ಏಕಾಂಗಿಯಾಗಿದ್ದಾರೆ. ಬಿಜೆಪಿ ನಾಯಕರು ಸುಮ್ಮನೆ ಆರೋಪ ಮಾಡಬೇಕೆಂದು ಮಾಡುತ್ತಿದ್ದಾರೆ. ಅವರಿಗೆ ಅದು ಬಿಟ್ಟು ಬೇರೆನೂ ಕೆಲಸ ಹೇಳಿ. ನಾವು ಇಂತಹ ಟೀಕೆಗಳಿಗೆ ಹೆಚ್ಚು ಗಮನ ಹರಿಸುವುದಿಲ್ಲ ಎಂದು ಹೇಳಿದರು.
ನಾಳೆಯಿಂದ ಎಲ್ಲಾ ನಾಯಕರು ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಎಲ್ಲರೂ ಒಂದೇ ಕಡೆ ಪ್ರಚಾರ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ, ಕ್ಷೇತ್ರವಾರು ಹಂಚಿಕೆ ಮಾಡಿ ಪ್ರಚಾರ ನಡೆಸುತ್ತೇವೆ. ಎಲ್ಲಾ ಕಡೆ ಪ್ರಚಾರ ಮಾಡಬೇಕಿರುವುದರಿಂದ ಕ್ಷೇತ್ರವಾರು ನಾಯಕರಿಗೆ ಪ್ರಚಾರ ಹಂಚಿಕೆ ಮಾಡಿದ್ದೇವೆ. ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ಡಿ.ಕೆ. ಶಿವಕುಮಾರ್ ಸಹ ಪ್ರಚಾರದಲ್ಲಿ ತೊಡಗುತ್ತಾರೆ. ಅವರೆಲ್ಲಾ ಪ್ರಚಾರದ ದಿನಾಂಕ ಸಹ ನೀಡಿದ್ದಾರೆ. ಎಲ್ಲರೂ ಒಟ್ಟಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದರು.
ಶಿವಸೇನೆ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನಾಳೆ ಬೆಂಗಳೂರಿಗೆ ಬರುತ್ತಾರೆ. ಅವರು ಬಂದ ಮೇಲೆ ನಾಯಕರ ಸಭೆ ನಡೆಸುತ್ತೇವೆ. ಬಿಜೆಪಿ ದೇಶಕ್ಕೆ ಅಪಾಯಕಾರಿ ಪಕ್ಷ. ಇದು ಎಲ್ಲ ಪಕ್ಷಗಳಿಗೂ ಗೊತ್ತಾಗಿದೆ. ಹಾಗಾಗಿ ಅವರ ಮಿತ್ರ ಪಕ್ಷಗಳು ಅವರನ್ನು ಬಿಟ್ಟು ಹೊರಬರುತ್ತಿವೆ. ನಾವೆಲ್ಲಾ ಒಂದಾಗಬೇಕೆಂದು ಕೈಜೋಡಿಸುತ್ತಿದ್ದಾರೆ. ಹೀಗಾಗಿ, ಶಿವಸೇನೆ ಜೊತೆ ಸರ್ಕಾರ ರಚನೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಯಾವುದೇ ಸಮಸ್ಯೆಯಾಗಲ್ಲ ಎಂದು ಹೇಳಿದರು.
ಎಲೆಕ್ಟ್ರೋಲ್ ಬಾಂಡ್ ಗದ್ದಲ ವಿಚಾರ ಕುರಿತು ಮಾತನಾಡಿದ ಅವರು, ಆರು ಸಾವಿರ ಕೋಟಿ ದೇಣಿಗೆ ಸಂಗ್ರಹವಾಗಿದೆ. ಅದರಲ್ಲಿ ಶೇ. 95 ರಷ್ಟು ಬಿಜೆಪಿಗೆ ಹೋಗಿದೆ. ಇದು ಮನಿಲ್ಯಾಂಡ್ರಿಂಗ್ ಪ್ರಕರಣವೇ ಆಗಿದೆ. ಹೀಗಾಗಿ ಇದರ ಬಗ್ಗೆ ಎಲ್ಲಾ ಪಕ್ಷಗಳು ಧ್ವನಿ ಎತ್ತಿವೆ. ಈ ಅಕ್ರಮ ದೇಣಿಗೆ ಅಪಾಯಕಾರಿಯಾದುದು. ಇದಕ್ಕೆ ಲೆಕ್ಕ ಇಡಲಿಲ್ಲವೆಂದರೆ ಹೇಗೆ ? ಎಂದು ಪ್ರಶ್ನಿಸಿದರು.