ಬೆಂಗಳೂರು : ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಕುಶಾಲನಗರಕ್ಕೆ ತೆರಳುತ್ತಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶುಕ್ರವಾರ ಬೆಳಿಗ್ಗೆ ರಸ್ತೆ ಮಾರ್ಗವಾಗಿ ಕೊಡಗು ಜಿಲ್ಲೆಯ ಕುಶಾಲನಗರ ತಲುಪಲಿದ್ದು ಅಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನತ್ತ ಪ್ರಯಾಣಿಸಲಿದ್ದಾರೆ.
ನ. 2ರಂದು ಬೆಳಗ್ಗೆ 11ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯಿಂದ ಉಂಟಾದ ಸಮಸ್ಯೆಗಳ ಕುರಿತು ಆಯಾ ಭಾಗದ ಮುಖಂಡರ ಜೊತೆ ಚರ್ಚಿಸಲಿದ್ದಾರೆ. ಸಂಜೆ 3ಕ್ಕೆ ಎಐಸಿಸಿ ಆದೇಶದ ಮೇರೆಗೆ ನಡೆಯಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧದ ಆಂದೋಲನ ಕುರಿತು ಚರ್ಚಿಸಲು ಸಭೆ ನಡೆಸಲಿದ್ದಾರೆ. ನ.3ರಂದು ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಮ್ಮಿಕೊಂಡಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್ ಪಾಲ್ಗೊಳ್ಳಲಿದ್ದಾರೆ.
ಒಟ್ಟಾರೆ ನಾಳೆ ನಗರದಲ್ಲಿ ಹಲವೆಡೆ ಪಕ್ಷ ಹಾಗೂ ಸರ್ಕಾರ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯಾವುದರಲ್ಲೂ ಪಾಲ್ಗೊಳ್ಳದೆ ಏಕಾಏಕಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.