ಬೆಂಗಳೂರು: ಡೆಂಗ್ಯೂ ಪ್ರಕರಣಗಳ ನಿಯಂತ್ರಣ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಮಧ್ಯಾಹ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಬಿಪಿಎಂ ಅಧಿಕಾರಿಗಳ ಜೊತೆ ಪಾಲಿಯೆಕ್ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು. ಬೆಂಗಳೂರಿನಲ್ಲೇ ಸುಮಾರು 4427 ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಡೆಂಘಿ ನಿಯಂತ್ರಣದಲ್ಲಿಡಲು ಮುಂಜಾಗೃತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಅವರು ಈ ವೇಳೆ ಸೂಚನೆ ನೀಡಿದರು.
ಡೆಂಘಿ ಕುರಿತಂತೆ ಕೇವಲ ಜಾಗೃತಿ ಜಾಥಾ ಮಾಡಿದರೆ ಪ್ರಯೋಜನವಿಲ್ಲ. ಸ್ಥಳೀಯ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರನ್ನ ಪರಿಣಾಮಕಾರಿಯಾಗಿ ಬಳಸಿಕೊಂಡು ಜನರನ್ನು ಎಚ್ಚರಿಸಬೇಕು. ಟೆಸ್ಟಿಂಗ್ ಸ್ಯಾಂಪಲ್ಸ್ ಹೆಚ್ಚು ಮಾಡುವ ಅಗತ್ಯವಿದೆ. ಕಳೆದ ಎರಡು ತಿಂಗಳಲ್ಲಿ ಡೆಂಘಿ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು.
ನಿಗಾ ವಹಿಸಲು ಸೂಚನೆ: ನಗರದಲ್ಲಿ ಜುಲೈನಲ್ಲಿ 1649, ಆಗಸ್ಟ್ನಲ್ಲಿ 1589, ಸೆಪ್ಟಂಬರ್ನಲ್ಲಿ ಈಗಾಗಲೇ 416 ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಮುಖ್ಯವಾಗಿ ಮಳೆಯಾಗಿ ನೀರು ನಿಂತ ಕಾರಣ ಸೊಳ್ಳೆಗಳ ಲಾರ್ವಾ ಉತ್ಪತ್ತಿಯಾಗಿರುವುದರಿಂದ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಹಾಗಾಗಿ ಎಲ್ಲ ಕಡೆ ಔಷಧಿ ಸಿಂಪಡಣೆ ಮಾಡಲಾಗುತ್ತಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಎಲ್ಲ ಆರೋಗ್ಯ ವೈದ್ಯಾಧಿಕಾರಿಗಳಿಗೆ ಹೆಚ್ಚು ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ನಮ್ಮ ಕ್ಲಿನಿಕ್ ಸಂಜೆ ಸೇವೆ: ಡೆಂಘಿ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನೆಲೆ ನಮ್ಮ ಕ್ಲಿನಿಕ್ ಅನ್ನು 12 ತಾಸುಗಳ ಕಾಲ ತೆರೆಯಲು ಸರ್ಕಾರ ನಿರ್ಧರಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 50 ನಮ್ಮ ಕ್ಲಿನಿಕ್ಗಳು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಈ ಸಮಯದಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಲ್ಯಾಬ್ ಟೆಕ್ನಿಷಿಯನ್ಗಳು ಹಾಗೂ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ವೈದ್ಯರು, ನರ್ಸ್ಗಳಿರುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಆ್ಯಪ್ ಬಿಡುಗಡೆ: ಇನ್ನು ಆ್ಯಪ್ ಮೂಲಕ ಡೆಂಘಿ ಪ್ರಕರಣಗಳನ್ನು ಮಾನಿಟರ್ ಮಾಡಲಾಗುತ್ತಿದ್ದು ಮಾನಿಟರ್ ಮಾಡುವ ಆ್ಯಪ್ ಗುರುವಾರ ಬಿಡುಗಡೆಯಾಗಲಿದೆ. ಆರೋಗ್ಯ ಕಾರ್ಯಕರ್ತರು ವಾರ್ಡ್ಗಳಲ್ಲಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸಿದ್ದಾರೆ ಎಂದು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ತಿಂಗಳ ಮೊದಲೇ ಡೆಂಘಿ ಪ್ರಕರಣಗಳ ಬಗ್ಗೆ ಮೂನ್ಸೂಚನೆ ನೀಡುವ ತಂತ್ರಜ್ಞಾನ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ನವರು ಕಂಡುಹಿಡಿದಿದ್ದಾರೆ. ಈ ತಂತ್ರಜ್ಞಾನವನ್ನು ಕೂಡ ಅಳವಡಿಸಿ ಬಿಡುಗಡೆಗೊಳಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಪ್ರತ್ಯೇಕ ವಿಭಾಗ: ಸರ್ಕಾರಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ ರಚಿಸುವ ಅಗತ್ಯವಿದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ನಮ್ಮ ಕ್ಲಿನಿಕ್ಗಳನ್ನು ಪಾಲಿಕೆ ನಿರ್ವಹಿಸುತ್ತಿದೆ. ಆದರೆ, ಹಲವು ಆರೋಗ್ಯ ಸೇವೆಗಳನ್ನು ಒದಗಿಸಲು ಪಾಲಿಕೆಗೆ ಸಾಧ್ಯವಿಲ್ಲ. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವಿಭಾಗ ಅಥವಾ ಕಮಿಷನರೇಟ್ ರಚಿಸುವುದಾಗಿ ಅವರು ಇದೇ ವೇಳೆ ಹೇಳಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ 6 ಹೈಟೆಕ್ ಲ್ಯಾಬ್ಗಳಿದ್ದು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್ಗಳಲ್ಲಿ ಸಂಗ್ರಹ ಮಾಡುವ ಬ್ಲಡ್ ಸ್ಯಾಂಪಲ್ಗಳನ್ನು ಲ್ಯಾಬ್ಗಳಿಗೆ ಕಳುಹಿಸಲು ರವಾನೆ (ಹಬ್ ಅಂಡ್ ಸ್ಪೋಕ್ ಮಾಡಲ್) ಹಾಗೂ ಇನ್ನಿತರೆ ಸೌಲಭ್ಯಗಳ ಅವಶ್ಯಕತೆಯಿದೆ. ಅದಕ್ಕೆ ಅನುದಾನ ಬೇಕಾಗಿದ್ದು, ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಾಲಿಕೆ ಸಹಯೋಗದೊಂದಿಗೆ ಎನ್.ಹೆಚ್.ಎಂ ಅನುದಾನದಿಂದ ಒದಗಿಸಲಾಗುವುದು ಎಂದು ಹೇಳಿದರು.
ಪ್ರತ್ಯೇಕ ಜಿಲ್ಲೆ: ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು, ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರ ಸಂಖ್ಯೆಯನ್ನು ಹೆಚ್ಚಿಸುವ ಜೊತೆಗೆ ಅವರ ವೇತನವನ್ನು ಕೂಡಾ ಕಾರ್ಮಿಕ ಇಲಾಖೆ ಕಾಯ್ದೆ ಪ್ರಕಾರ ಕನಿಷ್ಟ ವೇತನ ಹೆಚ್ಚಳ ಮಾಡಬೇಕಿದ್ದು, ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೇ ನಗರದಲ್ಲಿ ಎಲ್ಲ ಆರೋಗ್ಯ ಸೇವೆಗಳನ್ನು ಸಮನಾಂತರವಾಗಿ ತರುವ ಉದ್ದೇಶದಿಂದ ಬಿಬಿಎಂಪಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಪರಿಗಣಿಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು.
ಇದನ್ನೂ ಓದಿ: Dengue cases: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ.. 6,806 ಕೇಸ್ ಪತ್ತೆ, ಬೆಂಗಳೂರಲ್ಲೇ ಹೆಚ್ಚು!
ಡೆಂಘಿ ಜ್ವರದ ಲಕ್ಷಣಗಳೇನು?: ಜ್ವರ, ತಲೆನೋವು, ವಿಪರೀತ ಶೀತ, ಗಂಟಲು ನೋವು, ವಾಂತಿ, ಹೊಟ್ಟೆನೋವು, ಮೈ-ಕೈ ನೋವು, ಅತಿಸಾರ, ಹೃದಯ ಬಡಿತ ಹೆಚ್ಚಾಗುವುದು, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಬರುವುದು ಡೆಂಘಿ ಜ್ವರದ ಲಕ್ಷಣಗಳಾಗಿವೆ.
ಸೊಳ್ಳೆಗಳ ಮತ್ತು ಡೆಂಘಿ ಕೇಸ್ಗಳ ನಿಯಂತ್ರಣ ಹೇಗೆ?: ಸೊಳ್ಳೆಗಳನ್ನು ನಿಯಂತ್ರಿಸಬೇಕು. ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು. ಇದು ಪ್ರಮುಖವಾಗಿ ಮಾಡಬೇಕಾದ ಕೆಲಸ. ಉಳಿದಂತೆ ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ. ನೀರು ಶೇಖರಣೆಗೊಳ್ಳುವ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತ ಹಾಗೂ ಟೆರೆಸ್ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತೆಂಗಿನ ಚಿಪ್ಪು, ವಾಹನಗಳ ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.