ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರದೇಶ ಕಾಂಗ್ರೆಸ್ನ ನಾನಾ ಘಟಕಗಳ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದರು.
ಪಕ್ಷ ಸಂಘಟನೆ, ಸರ್ಕಾರದ ವಿರುದ್ಧ ಹೋರಾಟ, ಕೋವಿಡ್ ನಿಯಂತ್ರಣಕ್ಕೆ ಕಾಂಗ್ರೆಸ್ ಆರಂಭಿಸಿರುವ ಆರೋಗ್ಯ ಹಸ್ತ ಕಾರ್ಯಕ್ರಮ ಸೇರಿ ಹಲವು ವಿಚಾರಗಳ ಕುರಿತು ಈ ಸಂದರ್ಭದಲ್ಲಿ ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ನಡೆಸಬಹುದಾದ ಹೋರಾಟಗಳ ಕುರಿತು ಮುಖಂಡರಿಂದ ಡಿಕೆಶಿ ಮಾಹಿತಿ ಪಡೆದಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಮಾಹಿತಿ ಪಡೆದುಕೊಂಡಿರುವ ಅವರು, ಪಕ್ಷದ ವೇದಿಕೆಯಲ್ಲಿ ಈ ಕುರಿತು ಚರ್ಚಿಸಿ ಹೋರಾಟದ ರೂಪುರೇಷೆ ಹೆಣೆಯುವ ಪ್ರಯತ್ನ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ ದಿನಕ್ಕೆ 1ರಿಂದ 2 ಸಭೆ ನಡೆಸುತ್ತಿದ್ದು, ಪಕ್ಷದ ವಿವಿಧ ಹಂತದ ನಾಯಕರಿಂದ ಮಾಹಿತಿ ಕಲೆ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಹಾಗೂ ಇದರ ಜೊತೆಗೆ ಸರ್ಕಾರದ ವಿರುದ್ಧವೂ ಹೋರಾಟ ನಡೆಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಸಂಜೆಯ ಸಭೆ : ಇದೀಗ ಬೆಂಗಳೂರು ನಗರದ ಶಾಸಕರು, ಬಿಬಿಎಂಪಿ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳ ಜೊತೆ ಶಿವಕುಮಾರ್ ಸಭೆ ನಡೆಸಿದ್ದಾರೆ. ಬಿಬಿಎಂಪಿ ಚುನಾವಣೆ ಹಾಗೂ ಮಹಾನಗರದಲ್ಲಿ ಕೋವಿಡ್ ಆತಂಕ ಹೆಚ್ಚಾಗಿರುವ ಸಂಬಂಧ ಮುಖಂಡರಿಂದ ಮಾಹಿತಿ ಪಡೆಯಲಿದ್ದಾರೆ.