ಬೆಂಗಳೂರು : ಬಿಜೆಪಿಯವರು ಬ್ಲ್ಯಾಕ್ಮೇಲ್ ಮಾಡಿಸಿಕೊಳ್ಳುವಂತ ಕೆಲಸ ಮಾಡಿದ್ದಾರಾ ಎಂದು ಕೈಗಾರಿಕ ಸಚಿವ ಎಂ ಬಿ ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ಬಿಜೆಪಿಗರನ್ನು ಕಾಂಗ್ರೆಸ್ ಬ್ಲ್ಯಾಕ್ಮೇಲ್ ಮಾಡುತ್ತಿದೆ ಎಂಬ ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಹಾಗಾದರೆ ಬಿಜೆಪಿಯವರು ಬ್ಲ್ಯಾಕ್ಮೇಲ್ಗೆ ಒಳಗಾಗುವಂತ ಕೆಲಸ ಮಾಡಿದ್ದಾರೆ ಅಂತಾಯ್ತಲ್ಲ. ಬ್ಲ್ಯಾಕ್ ಮೇಲ್ ಆಗುವಂತ ಕೆಲಸ ಮಾಡಿದ್ದರೆ, ನೀವು ಬ್ಲ್ಯಾಕ್ ಮೇಲ್ ಆಗುತ್ತೀರ. ಸದ್ಯ ಈಗಲಾದರೂ ಸತ್ಯ ಹೊರಬಂದಿದೆ. ಯಾವ ತರದ ಬ್ಲ್ಯಾಕ್ಮೇಲ್ ನಮಗಂತೂ ಗೊತ್ತಿಲ್ಲ. ಏನು ಬ್ಲ್ಯಾಕ್ ಮೇಲ್ ಅದು. ಯಾವ ರೀತಿ ಬ್ಲ್ಯಾಕ್ ಮೇಲ್?. ಏನು ಲೂಟಿ ಹೊಡೆದ ಬ್ಲ್ಯಾಕ್ ಮೇಲಾ?. ಬೇರೆ ಬ್ಲ್ಯಾಕ್ ಮೇಲಾ?. ನನಗೆ ಗೊತ್ತಿಲ್ಲ. ಹೇಳಿದವರನ್ನೇ ಕೇಳಬೇಕು. ಏನು ಬ್ಲ್ಯಾಕ್ ಮೇಲ್ ಅಂತ ಕೇಳಿ ಅವರಿಗೆ. ಕೇಳಿ ನನಗೂ ಹೇಳಿ, ನನಗೂ ಗೊತ್ತಾಗಬೇಕಿದೆ ಎಂದು ಕುಟುಕಿದರು.
ಕಾಂಗ್ರೆಸ್ಗೆ ಲಿಂಗಾಯತ ಮುಖಂಡರು ಬರುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಕೇವಲ ಲಿಂಗಾಯತ ನಾಯಕರು ಮಾತ್ರವಲ್ಲ. ಎಲ್ಲ ಸಮುದಾಯಗಳ ಮುಖಂಡರು ಕೂಡ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮುಳುಗಿದ ಹಡಗು. ಸ್ವಾಭಾವಿಕವಾಗಿ ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ಸಮುದಾಯ, ದಲಿತ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಬಳಿಕ ಲಿಂಗಾಯತರು ಕಾಂಗ್ರೆಸ್ನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಎಂ ಬಿ ಪಾಟೀಲ್, ಅದು ಮೊನ್ನೆ ಚುನಾವಣೆಯಲ್ಲಿ ಸಾಬೀತಾಗಿದೆ. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಲಿಂಗಾಯತರ ಬೆಂಬಲ ಸಿಕ್ಕಿದೆ. ಈ ಬಾರಿ ರಾಜ್ಯ ವಿಧಾನಸಾಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದು ಬಂದಿದ್ದೇವೆ. ಬಿಜೆಪಿಯಲ್ಲಿ ಸುಮಾರು 62 ಪೈಕಿ 17 ಜನ ಮಾತ್ರ ಗೆದ್ದಿದ್ದಾರೆ. ಅದು ನೋಡಿದರೆ ಗೊತ್ತಾಗುತ್ತದೆ. ಹೀಗಾಗಿ ಬಲವಾದ ಶಿಫ್ಟ್ ಆಗಿದೆ. ಲಿಂಗಾಯತ ಸಮುದಾಯವೂ ಒಂದು ಫ್ಯಾಕ್ಟರ್ ಆಗಿದೆ. ಎಲ್ಲಾ ಸಮುದಾಯದವರು ಇಂದು ನಮಗೆ ಮತ ಹಾಕಿದ್ದಾರೆ ಎಂದು ತಿಳಿಸಿದರು.
ಕಾರ್ಯಕರ್ತರು ಕೇಳುವುದು ಸ್ವಾಭಾವಿಕ : ಪಕ್ಷದ ಕಾರ್ಯಕರ್ತರು ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕೇಳುವುದು ಸ್ವಾಭಾವಿಕ. ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡ ಬೇಕಾಗುತ್ತದೆ. ಎಲ್ಲರಿಗೂ ಸ್ಥಾನಮಾನ ಕೊಡಲು ಆಗುವುದಿಲ್ಲ. ಆದರೆ ಕೆಲವರಿಗೆ ಕೊಡಬೇಕಾಗುತ್ತದೆ. ಆ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಚಿಂತನೆ ಮಾಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ : ಸನಾತನ ಧರ್ಮ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ.. ದೇಶದ ಜನತೆಯ ಕ್ಷಮೆಯಾಚಿಸುವಂತೆ ಅಶ್ವತ್ಥ್ ನಾರಾಯಣ್ ಆಗ್ರಹ