ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ವಾರಣಾಸಿಯಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಅಲ್ಲಿನ ಸ್ವಾಮೀಜಿಗಳ ಆಶೀರ್ವಾದ ಸಹ ಪಡೆದುಕೊಳ್ಳುತ್ತಿದ್ದಾರೆ.
![Dharawad West MLA Aravind Bellad Visits Varanasi](https://etvbharatimages.akamaized.net/etvbharat/prod-images/kn-bng-08-bellad-kashi-sri-meet-script-7208080_21072021183541_2107f_1626872741_548.jpg)
ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಸಚಿವ ಮುರುಗೇಶ್ ನಿರಾಣಿ ವಾರಣಾಸಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ಮತ್ತೋರ್ವ ಆಕಾಂಕ್ಷಿ ಅರವಿಂದ ಬೆಲ್ಲದ್ ಕೂಡ ವಾರಣಾಸಿ ಪ್ರವಾಸಕ್ಕೆ ತೆರಳಿದ್ದಾರೆ. ಕಾಶಿ ವಿಶ್ವನಾಥನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದು, ಜಂಗಮವಾಡಿ ಮಠದಲ್ಲಿರುವ ವೀರಶೈವ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠಕ್ಕೆ ಭೇಟಿ ನೀಡಿದ್ದಾರೆ. ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
![Dharawad West MLA Aravind Bellad Visits Varanasi](https://etvbharatimages.akamaized.net/etvbharat/prod-images/kn-bng-08-bellad-kashi-sri-meet-script-7208080_21072021183541_2107f_1626872741_351.jpg)
ಪಂಚಪೀಠಗಳಲ್ಲಿ ರಂಭಾಪುರಿ ಪೀಠ, ಶ್ರೀಶೈಲ ಪೀಠದ ಜಗದ್ಗುರುಗಳು ನೇರವಾಗಿಯೇ ಯಡಿಯೂರಪ್ಪ ನಾಯಕತ್ವ ಬದಲಾವಣೆ ಮಾಡದಂತೆ ಹೇಳಿಕೆ ನೀಡಿದ್ದಾರೆ. ಅದರ ನಡುವೆ ಯಡಿಯೂರಪ್ಪನವರ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿರುವ ಅರವಿಂದ ಬೆಲ್ಲದ್ ಪಂಚಪೀಠದ ಕಾಶಿ ಜಗದ್ಗುರುಗಳ ಆಶೀರ್ವಾದ ಪಡೆದುಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.
ಇದನ್ನೂ ಓದಿ: ನಿನ್ನೆ ನಿರಾಣಿ, ಇಂದು ಬೆಲ್ಲದ್: ಕಾಶಿ ವಿಶ್ವನಾಥನ ಮೊರೆ ಹೋದ ಸಿಎಂ ಸ್ಥಾನದ ಆಕಾಂಕ್ಷಿಗಳು..!