ಮುಂಬೈ/ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಕೋಚ್‌ನಲ್ಲಿ ಬಿಟ್ಟು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆ ಡಿಜಿಸಿಎ ಗೋಫಸ್ಟ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಸೋಮವಾರ ಗೋಫಸ್ಟ್ ವಿಮಾನ ಜಿ 8-116 ಬೆಂಗಳೂರಿನಿಂದ ದೆಹಲಿಗೆ ತೆರಳಿತ್ತು. ಆದರೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ಯಾಸೆಂಜರ್ ಕೋಚ್‌ನಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿತ್ತು. ಈ ಸಂಬಂಧ ಪ್ರಯಾಣಿಕರು ಟ್ವೀಟ್ ಮೂಲಕ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕ ವಿಮಾನಯಾನ ಸಂಸ್ಥೆ ಗೋಫಸ್ಟ್‌ಗೆ ‘ಬಹು ತಪ್ಪುಗಳು’ ನಡೆದಿವೆ ಎಂದು ಶೋಕಾಸ್ ನೋಟಿಸ್ ನೀಡಿದೆ.
ತಕ್ಷಣದ ಸಂದರ್ಭದಲ್ಲಿ ಪ್ರಯಾಣಿಕರೊಂದಿಗೆ ಸರಿಯಾದ ಸಂವಹನ, ಸಮನ್ವಯ ಮತ್ತು ದೃಢೀಕರಣದ ಕೊರತೆಯಂತಹ ಬಹು ತಪ್ಪುಗಳು ಪರಿಸ್ಥಿತಿಗೆ ಕಾರಣವಾಗಿವೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಹೇಳಿಕೆಯಲ್ಲಿ ತಿಳಿಸಿದೆ. ಅಷ್ಟೇ ಅಲ್ಲ ನಿಯಂತ್ರಕರು ತಮ್ಮ ನಿಯಂತ್ರಕ ಕಟ್ಟುಪಾಡುಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಗೋಫಸ್ಟ್‌ನ ಅಕೌಂಟೆಬಲ್ ಮ್ಯಾನೇಜರ್/ಚೀಫ್ ಆಪರೇಷನ್ ಆಫೀಸರ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ತಮ್ಮ ಉತ್ತರವನ್ನು ಡಿಜಿಸಿಎಗೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶವನ್ನು ನೀಡಲಾಗಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋದ ಏರ್ಲೈನ್ಸ್: ಸೋಮವಾರ ಬೆಳಗ್ಗೆ 6.30ಕ್ಕೆ ಕೆಂಪೇಗೌಡ ಏರ್ಪೋಟ್ನಿಂದ ದೆಹಲಿಗೆ G8 116 ಗೋಫಸ್ಟ್ ಸಂಸ್ಥೆಯ ವಿಮಾನ ಹೊರಡಬೇಕಿತ್ತು. ಟರ್ಮಿನಲ್ನಿಂದ ವಿಮಾನದವರೆಗೆ ಮೊದಲನೇ ಟ್ರಿಪ್ನಲ್ಲಿ ಬಸ್ ಮೂಲಕ 50 ಜನ ಪ್ರಯಾಣಿಕರು ತೆರಳಿದ್ದರು. ಎರಡನೇ ಟ್ರಿಪ್ನಲ್ಲಿ 54 ಪ್ರಯಾಣಿಕರು ತೆರಳಿ ವಿಮಾನ ಏರಬೇಕಿತ್ತು. ಆದರೆ, ಎರಡನೇ ಟ್ರಿಪ್ ಬಸ್ ಬರುವ ಮುನ್ನವೇ ವಿಮಾನ ಟೇಕ್ ಆಫ್ ಆಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಪ್ರಯಾಣಿಕರನ್ನು ಗಮನಿಸದೇ ಏರ್ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಏರ್ಲೈನ್ಸ್ ವಿರುದ್ಧ ಏರ್ಪೋಟ್ನಲ್ಲೇ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಲ್ಲದೇ ಈ ಕುರಿತು ಡಿಜಿಸಿಎ ಮತ್ತು ಪ್ರಧಾನಿ ಕಾರ್ಯಾಲಯ, ವಿಮಾನಯಾನ ಸಂಸ್ಥೆಯ ಸಚಿವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಈಗ ಈ ಘಟನೆ ಬಗ್ಗೆ ಗೋಫಸ್ಟ್ ವಿಮಾನ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್ ನೀಡಿದ್ದು, ಎರಡು ವಾರಗಳಲ್ಲಿ ಉತ್ತರಿಸುವಂತೆ ತಿಳಿಸಿದೆ.
ಕ್ಷಮೆ ಕೇಳಿದ ಗೋಫಸ್ಟ್ ಸಂಸ್ಥೆ: ಪ್ರಯಾಣಿಕರು ಆಕ್ರೋಶ ಹೊರಹಾಕ್ತಿದ್ದಂತೆ ಟ್ವಿಟರ್ನಲ್ಲಿ ಗೋಫಸ್ಟ್ ಸಂಸ್ಥ ಕ್ಷಮೆ ಕೇಳಿತ್ತು. ಪ್ರಯಾಣಿಕರ ಮಾಹಿತಿ ಪಡೆದುಕೊಂಡು ಏರ್ಲೈನ್ಸ್ ಸಂಸ್ಥೆ ಟ್ವೀಟ್ ಮಾಡಿ ಕ್ಷಮೆ ಕೋರಿತ್ತು. ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.
ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ವ್ಯಕ್ತಿ ಬಂಧನ: ಕಳೆದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪದ ಮೇಲೆ ಶಂಕರ್ ಮಿಶ್ರಾ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಮಿಶ್ರಾ ಪಕ್ಕದಲ್ಲಿ ಅಮೆರಿಕದ ಮೂಲಕ ವೈದ್ಯ ಸುಗತ ಭಟ್ಟಾಚಾರ್ಜಿ ಕುಳಿತಿದ್ದರು. ಈ ವೇಳೆ, ಆರೋಪಿ ಎಸಗಿರುವ ಕೃತ್ಯವನ್ನು ತಮ್ಮ ದೂರಿನಲ್ಲಿ ಅವರು ವಿವರಿಸಿದ್ದರು. ಇದರ ಬಗ್ಗೆ ಕ್ರಮಗೊಂಡಿದ್ದ ವಿಮಾನಯಾನ ಸಂಸ್ಥೆ ಆರೋಪಿಯನ್ನು ಬಂಧಿಸಿ ಏರ್ಪೋರ್ಟ್ ಪೊಲೀಸ್ ಠಾಣೆಗೆ ಒಪ್ಪಿಸಿತ್ತು.
ಓದಿ: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಕೇಸ್: 4 ಗ್ಲಾಸ್ ವಿಸ್ಕಿ ಕುಡಿದು ತೇಲಾಡುತ್ತಿದ್ದ ಆರೋಪಿ!