ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸರ್ಕಾರದ ಹಣ ದುಬರ್ಳಕೆ ಆಗುತ್ತಿರುವುದನ್ನು ತಡೆಗಟ್ಟಲು ಹಣಕಾಸಿನ ವಹಿವಾಟುಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾರ್ಗಸೂಚಿ ಪಾಲಿಸುವಂತೆ ಆದೇಶ ಹೊರಡಿಸಿದ್ದಾರೆ.
ರಾಜ್ಯ ಆಂತರಿಕ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಸರ್ಕಾರಿ ಹಣ ದುರ್ಬಳಕೆಯಾಗುತ್ತಿದೆ ಎಂದು ಹಲವು ಬಾರಿ ಆಕ್ಷೇಪ ವ್ಯಕ್ತವಾಗಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಪ್ರವೀಣ್ ಸೂದ್, ಇನ್ನು ಮುಂದೆ ಸರ್ಕಾರದ ಹಣ ವ್ಯವಹಾರದಲ್ಲಿ ರೂಪಿಸಿದ ನಿಯಮಗಳು, ಆದೇಶಗಳು, ಹೊರಡಿಸಿರುವ ಸುತ್ತೋಲೆ ಪಾಲನೆ ಮಾಡದಿದ್ದರೆ ಅಂತಹ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ವಹಿಸುವುದು ಅತ್ಯವಶ್ಯವಾಗಿರುತ್ತದೆ ಎಂದು 11 ಅಂಶಗಳ ಮಾರ್ಗಸೂಚಿ ಹೊರಡಿಸಿದ್ದಾರೆ.
- ವೇತನ ಪಾವತಿಗೆ ಸಂಬಂಧಿಸಿದಂತೆ, ತಮ್ಮ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಗಳಿಂದ, ಅಧೀನ ಕಚೇರಿಗಳಿಂದ ಹಾಗೂ ವಿವಿಧ ವಿಭಾಗಗಳಿಂದ ಪಡೆದುಕೊಳ್ಳಬೇಕು ಅಬ್ಜೆಂಟೀವ್ ಸ್ಟೇಟ್‌ಮೆಂಟ್‌ಗಳನ್ನು ವಿಳಂಬಕ್ಕೆ ಅವಕಾಶವನ್ನು ಕೊಡದೆ ಆಯಾ ತಿಂಗಳಿನ ನಿಗದಿತ ದಿನಾಂಕದೊಳಗೆ ಕಚೇರಿಗೆ ತರಿಸಿಕೊಂಡು ನಿಯಮಗಳಡಿಯಲ್ಲಿ ಪರಿಶೀಲಿಸಿ, ವೇತನ ಮತ್ತು ಭತ್ಯೆಗಳ ಪಾವತಿ ವಿಷಯದಲ್ಲಿ ಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸುಬೇಕು.
- ವಿವಿಧ ಭತ್ಯೆಗಳ ಮಂಜೂರಾತಿ ಕುರಿತು ಪ್ರತಿಯೊಂದು ಪೊಲೀಸ್ ಠಾಣೆ, ಅಧೀನ ಕಚೇರಿಗಳ ಮತ್ತು ವಿವಿಧ ವಿಭಾಗಗಳಿಂದ ಬರಬೇಕಾದ ಪ್ರಯಾಣ ಭತ್ಯೆ, ವಾರದ ರಜಾ ಭತ್ಯೆ, ತನಿಖಾ ವೆಚ್ಚದ ಬಿಲ್ಗಳು, ಸಾದಿಲ್ವಾರು ವೆಚ್ಚಕ್ಕೆ ಸಂಬಂಧಿಸಿದ ಬಿಲ್ಗಳನ್ನು ಆಯಾ ತಿಂಗಳ ತದನಂತರದ ತಿಂಗಳಲ್ಲಿ ತಪ್ಪದೆ ಕಡ್ಡಾಯವಾಗಿ ಪಡೆದುಕೊಂಡು, ಜಾರಿಯಲ್ಲಿರುವ ನಿಯಮಗಳು ಮತ್ತು ಆದೇಶಗಳಡಿಯಲ್ಲಿ ಪರಿಶೀಲಿಸಿ, ಮಂಜೂರಾತಿಯನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದುಕೊಂಡು ಕ್ರಮಬದ್ಧವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವುದು.
- ವಿವಿಧ ಲೆಕ್ಕ ಶೀರ್ಷಿಕೆಗಳ ಅನುದಾನ ಕುರಿತು ಪ್ರತಿ ತಿಂಗಳು ಸಾಮಾನ್ಯ ಕ್ರಮಗಳಲ್ಲಿ ಬರಬಹುದಾದ ಆರ್ಆರ್ಟಿಯಂತಹ ಬಿಲ್ಗಳು ಕಚೇರಿ ವೆಚ್ಚಕ್ಕೆ ಸಂಬಂಧಿಸಿದ ಇತರೆ ಬಿಲ್ಗಳು, ಮುಂತಾದವುಗಳನ್ನು ಹೊರತುಪಡಿಸಿ, ಕಟ್ಟಡ ದುರಸ್ತಿ, ಜಮೀನು ಖರೀದಿ, ಇಲಾಖೆಗೆ ಬೇಕಾದ ವಿಶೇಷ ಉಪಕರಣ ಮತ್ತು ಸಾಮಾಗ್ರಿ ಖರೀದಿ ಹಾಗೂ ಮೂಲಸೌಲಭ್ಯಗಳ ಕುರಿತು ಬೇಕಾಗಬಹುದಾದ ವಾಹನ ಮತ್ತು ಇತರ ಪರಿಕರಗಳ ವಿಷಯದಲ್ಲಿ ವಾರ್ಷಿಕವಾಗಿ ಒಂದು ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು, ಸದರಿ ಕ್ರಿಯಾ ಯೋಜನೆಗೆ ಇಲಾಖಾ ಮುಖ್ಯಸ್ಥರಿಂದ ಆಡಳಿತಾತ್ಮಕ ಅನುಮೋದನೆಯನ್ನು ಪೂರ್ವಾನ್ವಯದಲ್ಲಿ ಪಡೆದುಕೊಂಡು, ಅದಕ್ಕೆ ಬೇಕಾದ ಅನುದಾನ ಲಭ್ಯತೆಯನ್ನು ಆಯವ್ಯಯದಲ್ಲಿ ಕಲ್ಪಿಸಿಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಅಗತ್ಯ ಕ್ರಮವನ್ನು ಜರುಗಿಸಬೇಕು.
- ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಂದ ಸಂಚಾರಿ ನಿಯಮಗಳ ಉಲ್ಲಂಘನೆ, ಕೋಟ್ಟಾ, ಧ್ವನಿವರ್ಧಕ ಹಾಗೂ ಇತರೆ ದಂಡದ ರೂಪದಲ್ಲಿ ಸಂಗ್ರಹಿಸುವ ನಗದು ಹಣವನ್ನು ನಿಯಮಾನುಸಾರ ಸಕಾಲದಲ್ಲಿ ಸರ್ಕಾರಕ್ಕೆ ಜಮೆ ಮಾಡದೆ, ನಿಯಮ ಉಲ್ಲಂಘಿಸಿ ತಡವಾಗಿ ಸರ್ಕಾರಕ್ಕೆ ಜಮೆ ಮಾಡುವುದರೊಂದಿಗೆ ತಾತ್ಕಾಲಿಕ ಹಣ ದುರಪಯೋಗಪಡಿಸುತ್ತಿರುವುದು ಹಾಗೂ ದಂಡದ ರೂಪದಲ್ಲಿ ಸಂಗ್ರಹಿಸಲಾದ ನಗದು ಹಣವನ್ನು ಸರ್ಕಾರಕ್ಕೆ ಜಮೆ ಮಾಡುವಂತೆ ನೋಡಿಕೊಳ್ಳಬೇಕು.
- ಪೊಲೀಸ್ ಠಾಣೆ ಹಂತದಲ್ಲಿ ಪೊಲೀಸ್ ಠಾಣೆ, ಅಧೀನ ಕಚೇರಿಗಳ ಮತ್ತು ವಿವಿಧ ವಿಭಾಗಗಳಿಂದ ಬರಬೇಕಾದ ಪ್ರಯಾಣ ಭತ್ಯೆ, ವಾರದ ರಜಾ ಭತ್ಯೆ, ತನಿಖಾ ವೆಚ್ಚದ ಬಿಲ್ಗಳ ಪ್ರಸ್ತಾವನೆಗಳ ಶಿಫಾರಸಿನಲ್ಲಿ ಸಿಬ್ಬಂದಿ ವರ್ಗಗಳ ಹೆಸರು ತಪ್ಪಾಗಿ ನಮೂದಿಸುವುದರೊಂದಿಗೆ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಸಲ್ಲಬೇಕಾದ ಭತ್ಯೆಗಳು ಬೇರೊಬ್ಬ ಸಿಬ್ಬಂದಿಗೆ ಪಾವತಿ ಆಗುತ್ತಿರುವುದರಿಂದ ಹಣ ದುರುಪಯೋಗವಾಗುತ್ತಿದೆ. ಆದ್ದರಿಂದ ಠಾಣಾ ಮಟ್ಟದಲ್ಲಿ ಇದನ್ನು ಕೂಲಂಕಷವಾಗಿ ಪರಿಶೀಲನೆಯೊಂದಿಗೆ ಸರಿಪಡಿಸುವಲ್ಲಿ ದುರುಪಯೋಗವಾಗುವುದನ್ನು ತಡೆಯಬಹುದಾಗಿದೆ.
- ಜಿಲ್ಲಾ ಪೊಲೀಸ್ ಕಚೇರಿಗಳಲ್ಲಿ ಸಾರ್ವಜನಿಕರಿಂದ ಆಯುಧ ಪರವಾನಗಿ, ಆರ್ಟಿಐ ಹಾಗೂ ಇತರೆ ಮೂಲಗಳಿಂದ ಸಾಮಾನ್ಯ ರಸೀದಿ ನೀಡುವುದರೊಂದಿಗೆ ಸಂಗ್ರಹಿಸುವ ನಗದು ಹಣವನ್ನು ನಿಯಮ ಉಲ್ಲಂಘಿಸಿ ತಡವಾಗಿ ಜಮೆ ಮಾಡುವದರೊಂದಿಗೆ ತಾತ್ಕಾಲಿಕ ಹಣ ದುರುಪಯೋಗ ಹಾಗೂ ಸರ್ಕಾರಕ್ಕೆ ಜಮಾ ಮಾಡದೇ ಹಣ ದುರುಪಯೋಗ ಮಾಡುತ್ತಿರುವುದು ಕಂಡು ಬರುತ್ತಿದೆ.