ಬೆಂಗಳೂರು: ಸಂರಕ್ಷಣೆ ದೃಷ್ಟಿಯಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸುತ್ತಲಿನ ಹತ್ತು ಕಿ.ಮೀ ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಅಭಿವೃದ್ಧಿ ಕಾರ್ಯ ಅಥವಾ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
ಉದ್ಯಾನವನದ ಸುತ್ತಲಿನ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿ ಕಡಿಮೆ ಮಾಡಿ ಸರ್ಕಾರ ಆದೇಶಿಸಿರುವ ಕ್ರಮ ಸರಿಯಲ್ಲ ಎಂದು ಆರೋಪಿಸಿ ಬೆಂಗಳೂರಿನ ಬನ್ನೇರುಘಟ್ಟ ಪ್ರಕೃತಿ ಸಂರಕ್ಷಣಾ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಆದರೆ, ಇದೇ ವೇಳೆ ಈ ಮಧ್ಯಂತರ ಆದೇಶವು ಈಗಾಗಲೇ ಚಾಲ್ತಿಯಲ್ಲಿರುವ ಅಭಿವೃದ್ಧಿ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅನ್ವಯಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
2016ರ ಜೂನ್ ತಿಂಗಳಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ 269 ಚದರ ಕಿ. ಮೀ ವ್ಯಾಪ್ತಿಯ ಪ್ರದೇಶವನ್ನು ಸೂಕ್ಷ್ಮ ವಲಯ ಎಂಬುದಾಗಿ ಘೋಷಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ಆದೇಶ 2018ಕ್ಕೆ ಕೊನೆಗೊಂಡಿದ್ದು, ಇದೀಗ ಉದ್ಯಾನವನದ ಸುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು 100 ಚದರ ಕಿ.ಮೀ ಕಡಿತಗೊಳಿಸಿ ಮತ್ತೊಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದು ಉದ್ಯಾನವನದ ರಕ್ಷಣೆಯ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಹೊಸ ಕರಡು ಅಧಿಸೂಚನೆ ಅನ್ವಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಅನೇಕ ಗ್ರಾಮಗಳು ಪರಿಸರ ಸೂಕ್ಷ್ಮ ವಲಯದಿಂದ ಹೊರಗುಳಿಯಲಿದ್ದು, ಅಭಿವೃದ್ಧಿ ಹಾಗೂ ವಾಣಿಜ್ಯ ಚಟುವಟಿಕೆಗಳು ಆರಂಭವಾಗುವ ಸಾಧ್ಯತೆ ಇದೆ. ಹಾಗಾದಲ್ಲಿ ಸಾಕಷ್ಟು ಅರಣ್ಯ ಪ್ರದೇಶ ನಾಶವಾಗಿ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ 2016ರ ಜೂನ್ ತಿಂಗಳಲ್ಲಿ ಹೊರಡಿಸಿರುವ ಅಧಿಸೂಚನೆಯನ್ನೇ ಅಂತಿಮ ಅಧಿಸೂಚನೆಯಾಗಿ ಘೋಷಣೆ ಮಾಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.