ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಉದ್ದನೆಯ ಸರತಿ ಸಾಲುಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಹೊಸ ಮೊಬೈಲ್ ಅಪ್ಲಿಕೇಶನ್ ಪ್ರತಿ ಮತಗಟ್ಟೆಯಲ್ಲಿನ ಸರದಿಗಳ ಬಗ್ಗೆ ನೈಜ ಸಮಯದ ಚಿತ್ರಣವನ್ನು ನೀಡಲಿದೆ. ನಗರ ಮತದಾರರನ್ನು ಮತದಾನ ಪ್ರಕ್ರಿಯೆಗೆ ಆಕರ್ಷಿಸಲು ಜಿಲ್ಲಾ ಚುನಾವಣಾ ಕಚೇರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಂಟಿಯಾಗಿ ಅಪ್ಲಿಕೇಶನ್ ಅಭಿವೃದ್ಧಿಪಡಿಸುತ್ತಿದೆ. ಚುನಾವಣಾ ಆಯೋಗವು ಸೂಚಿಸಿದಂತೆ ಮತದಾರರ ನಿರಾಸಕ್ತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕೇವಲ 55.04 ಶೇಕಡಾ ಮತಗಳು ದಾಖಲಾಗಿದ್ದವು.
ಮತದಾರರಲ್ಲಿ ಕಳವಳ ನಿವಾರಿಸುವ ಆಪ್ : ಮತಗಟ್ಟೆಗಳಲ್ಲಿ ಕಾಯುವ ಸಮಯ ಮತ್ತು ಪಾರ್ಕಿಂಗ್ ಸ್ಥಳದ ಕೊರತೆಯ ಬಗ್ಗೆ ಬೆಂಗಳೂರಿನ ಮತದಾರರಲ್ಲಿ ಕಳವಳವಿದೆ. ಈ ಅಪ್ಲಿಕೇಶನ್ ಮತಗಟ್ಟೆಗಳಲ್ಲಿನ ಪರಿಸ್ಥಿತಿಯ ನೈಜ-ಸಮಯದ ನವೀಕರಣಗಳನ್ನು ನೀಡುತ್ತದೆ. ನಾವು ಮತಗಟ್ಟೆಗಳ ಸಮೀಪ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸುತ್ತಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮತ್ತು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದಾರೆ.
28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳು ಸೂಕ್ಷ್ಮ: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಇನ್ನೆರಡನ್ನು ಮುಂದಿನ ಕೆಲವೇ ದಿನಗಳಲ್ಲಿ ಪಟ್ಟಿಗೆ ಸೇರಿಸಲು ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಸೂಕ್ಷ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಂದ ಹೆಚ್ಚು ಖರ್ಚು ಮಾಡುವುದನ್ನು ತಡೆಯಲು ಇಬ್ಬರು ಹೆಚ್ಚುವರಿ ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗುವುದು ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಸಿ ವಿಜಿಲ್ ಆ್ಯಪ್ನಿಂದ ದೂರು ಸಲ್ಲಿಕೆ: ಚುನಾವಣಾ ಆಯೋಗವು (ಮಾರ್ಚ್ 2019) ಲೋಕಸಭಾ ಚುನಾವಣೆಯನ್ನು ಅತ್ಯಂತ ಮುಕ್ತ, ಪಾರದರ್ಶಕವಾಗಿ ನಡೆಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿತ್ತು. ಈ ದಿಸೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ದೃಶ್ಯಾವಳಿ, ಛಾಯಾಚಿತ್ರಗಳನ್ನು ನೇರವಾಗಿ ಅಪ್ಲೋಡ್ ಮಾಡಬಹುದಾದ ಮೊಬೈಲ್ ಅಪ್ಲಿಕೇಷನ್ ಸಿ-ವಿಜಿಲ್ ಎಂಬ ಆ್ಯಪ್ ಪರಿಚಯಿಸಿತ್ತು.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಮತದಾರರನ್ನು ಓಲೈಸಲು ವಿವಿಧ ರೀತಿಯ ಆಸೆ, ಆಮಿಷ, ಉಡುಗೊರೆ ನೀಡುವುದಲ್ಲದೆ ಹಣ ಹಂಚಿಕೆ, ಮದ್ಯ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ನೀಡುವ ಸಾಧ್ಯತೆಗಳಿರುತ್ತವೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ. ಅದಕ್ಕಾಗಿ ಈ ಬಾರಿ ಚುನಾವಣಾ ಆಯೋಗವು ಸಿ-ವಿಜಿಲ್ ಎಂಬ ಆ್ಯಪ್ ಸಿದ್ಧಪಡಿಸಿ, ಉಪಯೋಗಿಸಲು ಅವಕಾಶ ಕಲ್ಪಿಸಿತ್ತು.
ಜಿಲ್ಲಾ ನಿಯಂತ್ರಣಾ ಕೇಂದ್ರಕ್ಕೆ ಮಾಹಿತಿ ರವಾನೆ: ಸಿ-ವಿಜಿಲ್ ಅಪ್ಲಿಕೇಷನ್ ಆಂಡ್ರಾಯಿಡ್ ಮೊಬೈಲ್‍ಗಳಲ್ಲಿ ಪ್ಲೇಸ್ಟೋರ್ನಲ್ಲಿ ಲಭ್ಯವಿದೆ. ಈ ಆ್ಯಪ್ನ್ನು ಡೌನ್‍ಲೋಡ್ ಮಾಡಿಕೊಳ್ಳಲು ಎರಡು ವಿಧದಲ್ಲಿ ಅವಕಾಶ ಇದೆ. ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ನೀಡುವ ಮೂಲಕ ನೋಂದಾಯಿಸಬಹುದು. ಈ ಆ್ಯಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆ ವಿಡಿಯೋ, ಫೋಟೋಗಳನ್ನು ನೇರವಾಗಿ ಅಪ್‍ಲೋಡ್ ಮಾಡಿದಲ್ಲಿ ಆಯಾ ಜಿಲ್ಲಾ ನಿಯಂತ್ರಣಾ ಕೇಂದ್ರಕ್ಕೆ ಬರುತ್ತದೆ. ಇದರಲ್ಲಿ ಐದು ನಿಮಿಷವುಳ್ಳ ವಿಡಿಯೋ, ಫೋಟೋ ಕಳುಹಿಸಲು ಅವಕಾಶ ಇದೆ.
ಯಾವ ಸ್ಥಳದಿಂದ ಫೋಟೋ, ವಿಡಿಯೋ ಅಪ್ಲೋಡ್ ಮಾಡಲಾಗುತ್ತಿದೆ ಎಂಬುದನ್ನು ಜಿಪಿಎಸ್ ಮೂಲಕ ಸ್ಥಳದ ಮಾಹಿತಿ ಡಿ.ಸಿ.ಸಿ. ಕೇಂದ್ರದಲ್ಲಿ ಪ್ರದರ್ಶನವಾಗುತ್ತದೆ. ತಕ್ಷಣ ನಿಯಂತ್ರಣ ಕೇಂದ್ರದಲ್ಲಿನ ಸಿಬ್ಬಂದಿ ಹತ್ತಿರದ ಫ್ಲೈಯಿಂಗ್ ಸ್ಕ್ವಾಡ್‍ಗೆ ಮಾಹಿತಿಯನ್ನು ರವಾನಿಸಲಿದೆ. ಅಪ್‍ಲೋಡ್ ಮಾಡಿದ 15 ನಿಮಿಷಗಳ ಒಳಗಾಗಿ ಉಲ್ಲಂಘನೆಯ ಸ್ಥಳಕ್ಕೆ ತಂಡ ಆಗಮಿಸಲು ಸಾಧ್ಯವಾಗಲಿದೆ.
ಇದನ್ನೂ ಓದಿ : ನೀತಿ ಸಂಹಿತೆ ಉಲ್ಲಂಘನೆ ನಿಮ್ಮ ಗಮನಕ್ಕೆ ಬಂದ್ರೆ ಈ ಆ್ಯಪ್ ನಿಂದ ದೂರು ಕೊಡಿ