ಬೆಂಗಳೂರು: ವಿದ್ಯಾರ್ಥಿಗಳ ಹಾಸ್ಟೆಲ್ ವ್ಯವಸ್ಥೆಗೆ ಕುರಿತು ಮೊದಲ ಆದ್ಯತೆಯ ವಿಚಾರವಾಗಿದ್ದು, ಸಿಎಂ ಜತೆ ಮಾತನಾಡಿ ಈ ಸಂಬಂಧ ಉತ್ತಮ ನಿರ್ಧಾರ ತಿಳಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದರು.
ಬೆಂಗಳೂರಿನ ಜೆಪಿ ಭವನದಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಉಪ್ಪಾರ ಸಮುದಾಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಕ್ಕಳ ಭವಿಷ್ಯ ಮುಖ್ಯ. ಶಾಲೆಗಳು ಆರಂಭವಾಗಿದ್ದು, ಆದಷ್ಟು ತ್ವರಿತವಾಗಿ ಹಾಸ್ಟೆಲ್ ಸಂಬಂಧ ಕ್ರಮ ಆಗಬೇಕಿದೆ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ಅನುದಾನ ಕೇಳಿದ್ದೀರಿ. ಕೇಳಿದಷ್ಟು ಕೊಡಿಸೋಕೆ ಆಗದಿದ್ದರೂ, ದೊಡ್ಡ ಮೊತ್ತ ಕೊಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಸರ್ಕಾರ ಹೇಗಿದೆ ಎನ್ನುವುದು ನಿಮಗೆ ಗೊತ್ತು. ನಾನು ನನ್ನ ಶಕ್ತಿಮೀರಿ ಹೆಚ್ಚಿನ ಅನುದಾನ ಕೊಡಿಸುತ್ತೇನೆ. ಜಿಲ್ಲೆ, ತಾಲೂಕು ಮಟ್ಟದ ನಾಯಕರ ಪಟ್ಟಿ ಕೊಡಿ, ಹೆಚ್ಚಿನವರಿಗೆ ಅವಕಾಶ ಕಲ್ಪಿಸುತ್ತೇನೆ. ತಾಲೂಕಿನಲ್ಲಿ ಕನಿಷ್ಠ 15 ಮಂದಿಯನ್ನಾದರೂ ಸಂಘಟಿಸಬೇಕು. ಇಂದು ಎಲ್ಲರಿಗೂ ಮಾತಿಗೆ ಅವಕಾಶ ನೀಡಲು ಆಗಲ್ಲ. ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ದೇವವರಾಜ್ ಅರಸು ಪ್ರಯತ್ನಿಸಿದ್ದರು. ಇಂದಿಗೂ ಈ ಪ್ರಯತ್ನ ನಡೆಯುತ್ತಲೇ ಇದೆ ಎಂದರು.
ಪ್ರಧಾನಿಗೆ ಪತ್ರ
ಉಪ್ಪಾರ ಸಮುದಾಯವನ್ನು ಎಸ್ಟಿಗೆ ಸೇರಿಸುವ ಸಂಬಂಧ ನಿರ್ಣಯ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತೇನೆ. ಸಮುದಾಯದ ಹಿತ ಕಾಪಾಡುವ ಸಲುವಾಗಿ ಎಲ್ಲರ ವಿಶ್ವಾಸ ಪಡೆದು ಚರ್ಚಿಸಿ ನಂತರ ಪ್ರಧಾನಿಗೆ ಪತ್ರ ಕಳಿಸಿಸುತ್ತೇನೆ. ರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷ ಅತ್ಯಗತ್ಯ. ದೇಶದಲ್ಲಿ ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳ ಎದುರು ತಲೆ ಎತ್ತಬೇಕಾದರೆ ನೀವು ನಮ್ಮ ಕೈ ಬಲಪಡಿಸಬೇಕಿದೆ. ಇಲ್ಲವಾದರೆ ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಏನಾಗಿದೆ ಎನ್ನುವುದು ಎಲ್ಲರ ಕಣ್ಣ ಮುಂದಿದೆ. ಇದೇ ಸ್ಥಿತಿ ಎಲ್ಲಾ ರಾಜ್ಯದ ಪ್ರಾದೇಶಿಕ ಪಕ್ಷಗಳಿಗೆ ಬರಬಾರದು ಎಂದು ದೇವೇಗೌಡ ಹೇಳಿದರು.
ಇನ್ನು ಜೆಡಿಎಸ್ ಮುಖಂಡ ಹಾಗೂ ಉಪ್ಪಾರ ಸಮುದಾಯದ ನಾಯಕರಾದ ಹೆಚ್. ಸಿ. ನೀರಾವರಿ ಮಾತನಾಡಿ, ದೇವೇಗೌಡರು ಸಿಎಂ ಆಗಿದ್ದಾಗ ಪ್ರವರ್ಗ ಎ ಗೆ ಶುಲ್ಕ ವಿನಾಯಿತಿ ನೀಡಿ, ಆದಾಯ ಮಿತಿ ತೆಗೆದು ಹಾಕಿದ್ದರು. ಆದರೆ ಇದನ್ನು ಬಿಜೆಪಿ ಸರ್ಕಾರ ಬಂದಾಗ ಮತ್ತೆ ಆದಾಯ ಮಿತಿಗೆ ಹಾಕಿದರು. ಇದರಿಂದ ನಮ್ಮ ಮಕ್ಕಳಿಗೆ ಉದ್ಯೋಗ, ಶಿಕ್ಷಣದಲ್ಲಿ ಅವಕಾಶ ಸಿಗುವುದು ಕಡಿಮೆ ಆಗಿದೆ. ನಂತರ ಬಂದ ಕಾಂಗ್ರೆಸ್ ಸರ್ಕಾರ ಕೂಡ ಮಿತಿ ತೆಗೆದಿಲ್ಲ ಎಂದರು.