ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಈ ತೀರ್ಪುನಿಂದ ಎರಡು ರಾಜಕೀಯ ವಿಚಾರ ನನ್ನ ಗಮನಕ್ಕೆ ಬಂದಿದೆ. ತೀರ್ಪಿನಿಂದ ಯಡಿಯೂರಪ್ಪನವರಿಗೆ ಯಾವುದೇ ಆತಂಕ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ಜೆಪಿ ಭವನದಲ್ಲಿ ಮಾತನಾಡಿದ ಅವರು, 17 ಜನ ಗೆದ್ದರೂ ಯಾರು ಮಂತ್ರಿ ಆಗುವುದಿಲ್ಲ. ನಿಗಮ-ಮಂಡಳಿ ಸಿಗಲ್ಲ. ಕೇವಲ ಶಾಸಕರಾಗಿ ಇರಬಹುದು ಅಷ್ಟೆ. ಚುನಾವಣೆ ಗೆಲ್ಲಲು ಅವರ ಪಕ್ಷದ ಸಚಿವರನ್ನು ನೇಮಕ ಮಾಡಿಕೊಳ್ಳಬಹುದು. ಯಡಿಯೂರಪ್ಪ ಮೂರೂವರೆ ವರ್ಷ ಸೇಫ್ ಆಗಿ ಇರುತ್ತಾರೆ ಎಂದರು.
ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ 17 ಸ್ಥಾನ ಗೆದ್ದರು ಬಹುಮತ ಬರಲ್ಲ. ಅವರಿಗೂ ಬಹುಮತ ಇಲ್ಲ. ನಾವು, ಕಾಂಗ್ರೆಸ್ ಮತ್ತೆ ದೋಸ್ತಿ ಮಾಡುವುದಿಲ್ಲ. ಉಳಿದ ಮೂರೂವರೆ ವರ್ಷ ಪಕ್ಷ ಸಂಘಟನೆ ಮಾಡುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಮಾಜಿ ಸ್ಪೀಕರ್, ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುತ್ತಾರೆ. ಇದರ ಅರ್ಥ ಏನು ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಏನು ಮಾತಾಡುವುದಿಲ್ಲ. ಸಿದ್ದರಾಮಯ್ಯಗೂ ವಿಪಕ್ಷ ಸ್ಥಾನ ಗಟ್ಟಿಯಾಗಿ ಇರುತ್ತದೆ. ನಾವು, ಕಾಂಗ್ರೆಸ್ನವರು ಮತ್ತೆ ನೆಂಟಸ್ಥನ ಮಾಡುವುದಿಲ್ಲ. ಹೀಗಾಗಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇಬ್ಬರೂ ಸೇಫ್. ಇರೋ ಮೂರೂವರೆ ವರ್ಷ ನಾನು ಪಕ್ಷ ಕಟ್ಟುತ್ತೇನೆ ಎಂದರು.
ಉಪ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 17 ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀವಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅದರ ಬಗ್ಗೆ ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ ಎಂದರು.