ದೇವನಹಳ್ಳಿ (ಬೆಂಗಳೂರು ಗ್ರಾ.): ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ವೆಂಕಟಸ್ವಾಮಿ ಅವರಿಗೆ ಇಂದು ಮುಂಜಾನೆ ಹೃದಯಾಘಾತವಾಗಿದೆ. ಕುಟುಂಬಸ್ಥರು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನಡೆಯುತ್ತಿದೆ.
ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ವೆಂಕಟಸ್ವಾಮಿ ಬಿರುಸಿನ ಪ್ರಚಾರ ಮಾಡುತ್ತಿದ್ದರು. ನಿನ್ನೆ ಪ್ರಚಾರ ಮುಗಿಸಿ ಮನೆಗೆ ತೆರಳಿದ್ದರು. ಆಯಾಸದಿಂದ ಹೃದಯಾಘಾತವಾಗಿದೆ ಎನ್ನಲಾಗಿದೆ. ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಕ್ಕೆ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಮಾ.11ರಂದು ಚಾಮರಾಜನಗರ ಜಿಲ್ಲೆಯ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ (62) ವಿಧಿವಶರಾಗಿದ್ದರು. ಮೈಸೂರಿನ ವಿಜಯನಗರದಲ್ಲಿ ವಾಸವಾಗಿದ್ದ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಮಾ.12ರಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗಿತ್ತು.
ಇದನ್ನೂ ಓದಿ: ಧ್ರುವನಾರಾಯಣ ಹುಟ್ಟೂರಲ್ಲಿ ನೀರವ ಮೌನ: ತಂದೆ - ತಾಯಿ ಸಮಾಧಿ ಬಳಿ ಅಂತ್ಯಕ್ರಿಯೆ, ಸಕಲ ಸಿದ್ಧತೆ
ಕ್ರಿಕೆಟ್ ಆಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ: ರಾಜ್‌ಕೋಟ್‌ನ ರೇಸ್ ಕೋರ್ಸ್ ಸಮೀಪ ಇರುವ ಶಾಸ್ತ್ರಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಮಯೂರ್ ನಟವರ್ ಭಾಯ್ ಮಕ್ವಾನಾ(43) ಎಂಬ ವ್ಯಕ್ತಿ ಸಾವನ್ನಪ್ಪಿದವರು. ತಮ್ಮ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದಾಗ ಅವಘಡ ಸಂಭವಿಸಿದೆ. ಕ್ರಿಕೆಟ್ ಆಡುತ್ತಿದ್ದಾಗ ಮಯೂರ್ ಮಕ್ವಾನಾ ಒಮ್ಮೆ ಕುಸಿದು ಬಿದ್ದಿದ್ದರು. ತಕ್ಷಣ ಸ್ನೇಹಿತರು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಯೂರ್ ಮಕ್ವಾನಾ ಅವರ ಪ್ರಾಣ ಹಾರಿಹೋಗಿತ್ತು. ಮಯೂರ್ ಮಕ್ವಾನಾ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು.
ಇದನ್ನೂ ಓದಿ: ರಾಜ್ಕೋಟ್ದಲ್ಲಿ ಕ್ರಿಕೆಟ್ ಆಡುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
ವ್ಯಕ್ತಿ ಹಠಾತ್ ಸಾವು: ಯೋಗ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಹಠಾತ್ ಆಗಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ಇತ್ತೀಚೆಗೆ ನಡೆದಿತ್ತು. ಮೃತರನ್ನು ಮುಖೇಶ್‌ಭಾಯ್(44) ಎಂದು ಗುರುತಿಸಲಾಗಿತ್ತು. ಇಲ್ಲಿನ ವರಚಾ ಪ್ರದೇಶದ ಹೀರಾಬಾಗ್ ವೃತ್ತದ ಬಳಿಯ ಸಂತಾಲಾಲ್ ಸೊಸೈಟಿಯಲ್ಲಿ ವಾಸಿಸುತ್ತಿದ್ದ ಮುಖೇಶ್‌ಭಾಯ್, ಕಿರಣ್ ಹರೇ ಕೃಷ್ಣ ಫಾರಂನಲ್ಲಿ ಯೋಗಾಭ್ಯಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಯೋಗಾಭ್ಯಾಸದ ವೇಳೆ ಕಾಣಿಸಿಕೊಂಡ ಎದೆ ನೋವು: ವ್ಯಕ್ತಿ ಹಠಾತ್ ಸಾವು