ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನದ ದಂಪತಿಯನ್ನು ಕೂಡಲೇ ಅವರ ದೇಶಕ್ಕೆ ಗಡಿಪಾರು ಮಾಡುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಅಕ್ರಮವಾಗಿ ನೆಲೆಸಿದ್ದ ಆರೋಪಕ್ಕೆ ಸಂಬಂಧಿಸಿ ಅಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಕಡಿತಗೊಳಿಸುವಂತೆ ಕೋರಿ ದಂಪತಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾ. ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಹೈಕೋರ್ಟ್ ನ್ಯಾ. ಅರವಿಂದ ಕುಮಾರ್, ದೇಶದ ಭದ್ರತೆ ದೃಷ್ಟಿಯಿಂದ ಅನ್ಯ ದೇಶದ ಕ್ರಿಮಿನಲ್ಗಳು ಈ ನೆಲೆಯಲ್ಲಿ 1 ನಿಮಿಷ ಕೂಡ ಇರಬಾರದು. ತಕ್ಷಣವೇ ಪಾಕ್ ಪ್ರಜೆಗಳನ್ನು ಹಸ್ತಾಂತರ ಮಾಡಿ. 24 ಗಂಟೆಯಲ್ಲಿ ವಾಘಾ ಗಡಿಗೆ ಕರೆದುಕೊಂಡು ಹೋಗಿ ಎಂದು ಸೂಚನೆ ನೀಡಿದರು.
ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ದಂಪತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಂಬಂಧಿಸಿದಂತೆ ಕೆಲವು ಪ್ರಕ್ರಿಯೆ ನಡೆಸಲು ಹೆಚ್ಚಿನ ಸಮಯ ಕೋರಿ ಮನವಿ ಮಾಡಿದ್ರು. ಅಂತಿಮವಾಗಿ ಮೇ5 ರೊಳಗೆ ಹಸ್ತಾಂತರ ಮಾಡುವಂತೆ ಹೈಕೋರ್ಟ್ ಸೂಚಿಸಿದೆ.
ಪ್ರಕರಣವೇನು?
2017 ರಲ್ಲಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಪ್ರಜೆಗಳು, ಪಾಕಿಸ್ತಾನದ ಕರಾಚಿ ಜಿಲ್ಲೆಯ ಚಕ್ರಫೋಟ್ ನಿವಾಸಿ ಕಾಸೀಫ್ ಶಂಸುದ್ಧೀನ್ ಹಾಗೂ ಕರಾಚಿ ಜಿಲ್ಲೆಯವರೇ ಆದ ಕಿರಣ್ ಗುಲಾಮ್ ಅಲಿ ಬೆಂಗಳೂರಿಗೆ ಬಂದು ಮದುವೆಯಾಗಿದ್ದರು. ದಂಪತಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ವೀಸಾ ಅವಧಿ ಮುಗಿದ ನಂತರವೂ ದಂಪತಿ ಇಲ್ಲಿಯೆ ನೆಲೆಸಿದ್ದಾರೆ ಎಂಬ ಆರೋಪದ ಮೇಲೆ ಬನಶಂಕರಿ ಮತ್ತು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ದಂಪತಿಯನ್ನು ಬಂಧಿಸಿದ್ದರು. ಇಬ್ಬರ ವಿರುದ್ಧ 2 ಪತ್ಯೇಕ ಪ್ರಕರಣ ದಾಖಲಿಸಿದ್ದರು. ಸದ್ಯ ಆರೋಪಿಗಳು ಬೆಂಗಳೂರಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.