ಬೆಂಗಳೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಗುರಿಯಾಗಿಸಿಕೊಂಡು ಕುಡಿದ ಮತ್ತಿನಲ್ಲಿ ಸರಗಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ರಾಜಾನುಕುಂಟೆಯ ತಿಮ್ಮಸಂದ್ರ ನಿವಾಸಿ ಇಮ್ರಾನ್ ಬಂಧಿತ ಆರೋಪಿಯಾಗಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಿಮ್ಮಸಂದ್ರದಲ್ಲಿ ವ್ಯವಸಾಯ ಮಾಡಿಕೊಂಡಿರುವ ರಾಧಾಬಾಯಿ ಎಂಬುವರು ಸೋಮವಾರ ಮಧ್ಯಾಹ್ನ ತಮ್ಮ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ನಿರತರಾಗಿದ್ದರು. ಈ ವೇಳೆ ಖದೀಮ ಬೈಕ್ನಲ್ಲಿ ಬಂದು ಮಹಿಳೆಯ ಸರ ಕಸಿಯಲು ಪ್ರಯತ್ನಿಸಿದ್ದಾನೆ. ಬಳಿಕ ಅಲ್ಲೇ ಇದ್ದ ಕುಡುಗೋಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡುತ್ತಿದ್ದಂತೆ ಅಲ್ಲಿಂದ ಓಡಿ ಹೋಗಿ ನೀರಿಲ್ಲದ ಬಾವಿಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾನೆ. ಇನ್ನು ಸ್ಥಳೀಯರು ಈತನನ್ನು ಹಿಡಿದು ಚಿಕ್ಕಜಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಈತನ ವಿಚಾರಣೆ ನಡೆಸಿದಾಗ ರಾಜಾನುಕುಂಟೆ ನಿವಾಸಿಯಾಗಿದ್ದು, ಜೀವನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಕಾಲ ದೆಹಲಿಯಲ್ಲಿ ಇದ್ದಾಗ ಅಲ್ಲಿಯೂ ಇದೇ ರೀತಿ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.