ಬೆಂಗಳೂರು: ಲಾಕ್‌ಡೌನ್ ವೇಳೆಯಲ್ಲಿ ನಡೆದಿದ್ದ ನಿಗೂಢ ಕೊಲೆ ಪ್ರಕರಣವೊಂದು ಆ ಏರಿಯಾವನ್ನೇ ಬೆಚ್ಚಿಬೀಳಿಸಿತ್ತು. ಕೊಲೆಗಾರ ಯಾವುದೇ ಸುಳಿವು ನೀಡದೇ ಕೆಲಸ ಮುಗಿಸಿದ್ದ. ಆರೋಪಿಯನ್ನು ಬಂಧಿಸಲಾಗದೆ ತಲೆಕೆಡಿಸಿಕೊಳ್ಳುತ್ತಿದ್ದ ಪೊಲೀಸರಿಗೆ ಸಿಕ್ಕ ಆ ಒಂದು ಸುಳಿವು ಹಂತಕನನ್ನು ಕಂಬಿ ಹಿಂದೆ ಸೇರುವಂತೆ ಮಾಡಿದೆ.
ಅಂದು ರಾತ್ರಿ ಕಲಬುರಗಿ ಮೂಲದ ಆಶೋಕ ಕೊಲೆಗೀಡಾಗಿದ್ದ. ಪ್ರಕರಣದ ಬಂಧಿತ ಆರೋಪಿ ಸತೀಶ್. ಈತ ಮಾಲೂರು ಮೂಲದವನಾಗಿದ್ದು ಕಳೆದ ವರ್ಷ ಲಾಕ್‌ಡೌನ್ ವೇಳೆ ನಗರಕ್ಕೆ ಬಂದು ಚಿಂದಿ ಆಯುತ್ತಿದ್ದು ಬಾಬುಸಾಪಾಳ್ಯದ ಬಳಿಯ ಬಿಡಿಎ ಪಾರ್ಕ್‌ನಲ್ಲಿ ರಾತ್ರಿ ಕಳೆಯುತ್ತಿದ್ದನಂತೆ. ಅಶೋಕನೂ ಚಿಂದಿ ಆಯುತ್ತಿದ್ದು ಇದೇ ಪಾರ್ಕ್‌ನಲ್ಲಿ ಮಲಗುತ್ತಿದ್ದ. ಮೇ 15 ರಂದು ಮಲಗುವ ಜಾಗದ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಸಿಟ್ಟಿನಿಂದ ಚಿಂದಿ ಆಯಲು ಬಳಸುತ್ತಿದ್ದ ಮಚ್ಚು ತೆಗೆದುಕೊಂಡ ಸತೀಶ್ ಹತ್ತಾರು ಬಾರಿ ಅಶೋಕನ ತಲೆ ಭಾಗಕ್ಕೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದ. ಕೊಲೆ ಬಳಿಕ ಊರು ಸೇರಿಕೊಂಡು ಕೆಲ ದಿನಗಳ ನಂತರ ಮತ್ತೆ ಹೆಣ್ಣೂರಿಗೆ ಬಂದು ಚಿಂದಿ ಆಯುತ್ತಿದ್ದನಂತೆ.
ಈ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಕೊಲೆ ಜಾಗದಲ್ಲಿ ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿರಲಿಲ್ಲ. ಆದರೆ, ನೆತ್ತರು ಹರಿದಿದ್ದ ಜಾಗದಲ್ಲಿ ಹಂತಕ ತನ್ನ ಚಪ್ಪಲಿಯಿಂದ ಮೃತನ ರಕ್ತ ತುಳಿದ ಚಪ್ಪಲಿ ಗುರುತಿನ ಹೆಜ್ಜೆ ಪೊಲೀಸರಿಗೆ ಸಿಕ್ಕಿತ್ತು. ಇಡೀ ಪ್ರಕರಣ ಬೇಧಿಸಲು ಪೊಲೀಸರಿಗೆ ಇದು ಮಹತ್ವದ ಸುಳಿವಾಗಿತ್ತು.
ಕೊಲೆಯ ನಂತರ ಸಿಕ್ಕ ಚಪ್ಪಲಿ ಹೆಜ್ಜೆ ಗುರುತನ್ನು ಬೆನ್ನತ್ತಿದ್ದ ಪೊಲೀಸರು ಪಾರ್ಕ್‌ಗೆ ಬರುವವರ ಬಗ್ಗೆ ಹಾಗೂ ಸ್ಥಳೀಯರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಲಾಕ್ ಡೌನ್ ಇದ್ದಿದ್ದರಿಂದ ಪ್ರತಿನಿತ್ಯ ಪಾರ್ಕ್‌ನಲ್ಲಿ ಚಿಂದಿ ಆಯುವವರು ಕೂಲಿ ಕೆಲಸ ಮಾಡುವವರು ಮಲಗುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಬಾಬುಸಾಪಾಳ್ಯ ಬಿಡಿಎ ಪಾರ್ಕ್‌ನಲ್ಲಿ ಮಲಗಲು ಬರುತ್ತಿದ್ದ ಸುಮಾರು 50 ಮಂದಿಯ ಹೆಜ್ಜೆ ಗುರುತನ್ನ ಪೊಲೀಸರು ಕಲೆ ಹಾಕಿದ್ದಾರೆ. ಕೊಲೆ ಮಾಡಿ ಊರಿಗೆ ಹೋಗಿ ವಾಪಸ್ ಆಗಿದ್ದ ಆರೋಪಿ ಸತೀಶ್ ಚಿಂದಿ ಆಯುತ್ತಿದ್ದನಂತೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹಂತಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಪ್ಪಲಿ ಕಾಲನ್ನು ನೀರಿನಲ್ಲಿ ತೇವ ಮಾಡಿಸಿ ಮರಳಿನ ಮೇಲೆ ಹೆಜ್ಜೆ ಇಡಿಸಿದಾಗ ಅದು ಆರೋಪಿ ಸತೀಶನದ್ದೇ ಎಂದು ಪೊಲೀಸರು ದೃಢಪಡಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ತೀವ್ರಗೊಳಿಸಿದಾಗ ಆರೋಪಿ ಹತ್ಯೆಯ ರಹಸ್ಯ ಬಿಚ್ಚಿಟ್ಟಿದ್ದಾನೆ.
'ಪ್ರತಿನಿತ್ಯ ನಾನು ಮಲಗುವ ಜಾಗದಲ್ಲಿ ಮೃತ ವ್ಯಕ್ತಿ ಮಲಗಿದ್ದ. ನಾನು ಎಷ್ಟೇ ಬಾರಿ ಕೇಳಿದ್ರೂ ಮಲಗಲು ಜಾಗ ಬಿಡಲಿಲ್ಲ. ಕುಡಿದು ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ನನ್ನ ಕೈಯ್ಯಲ್ಲಿದ್ದ ಮಚ್ಚಿನಿಂದ 12 ಬಾರಿ ಅವನ ತಲೆಗೆ ಹಲ್ಲೆ ಮಾಡಿದೆ' ಎಂದು ಆರೋಪಿ ತಿಳಿಸಿದ್ದಾನೆ.