ಬೆಂಗಳೂರು: ರಾಜ್ಯದಲ್ಲಿ ಕೃಷಿಯನ್ನು ಸುಸ್ಥಿರಗೊಳಿಸುವುದರ ಜೊತೆಗೆ ಆರ್ಥಿಕವಾಗಿ ಲಾಭದಾಯಕ ಉದ್ಯೋಗವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಒದಗಿಸಿದೆ. ಸಣ್ಣ, ಮಧ್ಯಮ ಹಾಗೂ ಮಹಿಳಾ ರೈತರ ಜೀವನ ಮಟ್ಟ ಹಾಗೂ ಆದಾಯ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಮಾರು 15 ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಿವೆ. ಇದರಲ್ಲಿ ಪ್ರಮುಖವಾದವುಗಳೆಂದರೆ,
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ : ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ತಲಾ 2 ಸಾವಿರ ರೂ.ನಂತೆ ಮೂರು ಕಂತುಗಳಲ್ಲಿ ವಾರ್ಷಿಕವಾಗಿ 6 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಈ ಯೋಜನೆಯ ವಾರ್ಷಿಕ 6 ಸಾವಿರ ರೂ.ಗೆ ಎರಡು ಕಂತುಗಳಲ್ಲಿ 4 ಸಾವಿರ ರೂ. ಹೆಚ್ಚುವರಿಯಾಗಿ ನೀಡಲು ಘೋಷಿಸಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ : ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದರೆ ರೈತರಿಗೆ ಪರಿಹಾರ ನೀಡಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರೈತರು ಬೆಳೆ ವಿಮೆ ಮಾಡಿಸಿದರೆ ಮಳೆ, ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದಾಗ ರೈತರಿಗೆ ಪರಿಹಾರ ನೀಡಲಾಗುವುದು. ಬೆಳೆ ಸಾಲ ಮಾಡಿದ ರೈತರಿಗೆ ಬೆಳೆ ವಿಮೆ ಕಡ್ಡಾಯಗೊಳಿಸಲಾಗಿದೆ. ಸಾಲ ಪಡೆಯದ ರೈತರು ಅಧಿಸೂಚಿತ ಘಟಕದಡಿ ಬೆಳೆಗಳಿಗೆ ನಿಗದಿತ ಅವಧಿಯೊಳಗೆ ಪ್ರಿಮಿಯಂ ಮೊತ್ತ ಪಾವತಿಸಿ ಬೆಳೆ ವಿಮೆ ಮಾಡಿಸಿಕೊಳ್ಳಬಹುದು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ : ರೈತರ ಜಮೀನಿನಲ್ಲಿ ನೀರು ಪೋಲಾಗುವುದನ್ನು ತಡೆಯುವುದಕ್ಕಾಗಿ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕ ಹಾಗೂ ಹನಿ ನೀರಾವರಿ ಘಟಕಗಳಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುತ್ತಿದೆ.
ಕೃಷಿ ಭಾಗ್ಯ ಯೋಜನೆ: ಮಳೆ ನೀರಿನ ಸಮರ್ಥ ಬಳಕೆ ಮತ್ತು ಸಂರಕ್ಷಿತ ನೀರಾವರಿಗೆ ತನ್ಮೂಲಕ ಸುಧಾರಿತ ಬೆಳೆ ಉತ್ಪಾದನಾ ಪದ್ದತಿ ಅಳವಡಿಸಲು ರೈತರನ್ನು ಪ್ರೋತ್ಸಾಹಿಸಲು ಕೃಷಿ ಭಾಗ್ಯ ಯೋಜನೆಯಡಿ ಪ್ಯಾಕೇಜ್ ರೂಪದಲ್ಲಿ ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಪಂಪ್ ಸೆಟ್, ಲಘು ನೀರಾವರಿ ಘಟಕ, ಕೃಷಿ ಹೊಂಡದ ಸುತ್ತಲೂ ನೆರಳು ಪರದೆ ಘಟಕಗಳಿಗೆ ಸಹಾಯಧನ ನೀಡಲಾಗುತ್ತದೆ.
ಕೃಷಿ ಯಂತ್ರಧಾರೆ : ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಎಲ್ಲ ಜಿಲ್ಲೆಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಕಡಿಮೆ ಬಾಡಿಗೆ ದರದಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದು.
ಕೃಷಿ ಯಾಂತ್ರೀಕರಣ ಯೋಜನೆ : ಕಾರ್ಮಿಕರ ಸಮಸ್ಯೆ ನೀಗಿಸಿ, ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆ ತಗ್ಗಿಸಿ, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಈ ಯೋಜನೆಯಡಿ ರೈತರಿಗೆ ಶೇ. 50 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ಗರಿಷ್ಠ 1 ಲಕ್ಷ ರೂಪಾಯಿಯವರೆಗೆ ನೀಡಲಾಗುತ್ತದೆ. ಉಳುಮೆಯಿಂದ ಕೊಯ್ಲುವರೆಗೆ ಉಪಯುಕ್ತವಿರುವ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ರೈತರಿಗೆ ನೀಡಲಾಗುತ್ತದೆ.
ಬೀಜಗಳ ಪೂರೈಕೆ ಯೋಜನೆ : ಪ್ರಮಾಣಿತ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ರೈತರಿಗೆ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ. ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಕ್ರಮವಾಗಿ ಶೇ. 50 ಹಾಗೂ ಶೇ. 75ರ ಸಹಾಯಧನ ಒದಗಿಸಲಾಗುತ್ತದೆ.
ಮಣ್ಣಿನ ಸತ್ವ ಹೆಚ್ಚಿಸುವಿಕೆ ಯೋಜನೆ : ಮಣ್ಣಿನಲ್ಲಿರುವ ಲಘು ಪೋಷಕಾಂಶಗಳ ಕೊರತೆ ನೀಗಿಸಲು ಗೊಬ್ಬರ ಬೀಜಗಳು, ಲಘು ಪೋಷಕಾಂಶಗಳು, ಜೈವಿಕ ಗೊಬ್ಬರಗಳು, ಸಾವಯವ ಗೊಬ್ಬರ ಪರಿಕರಗಳನ್ನು ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಕ್ರಮವಾಗಿ ಶೇ. 50 ಹಾಗೂ ಶೇ. ಶೇ. 75 ಸಹಾಯಧನ ಒದಗಿಸುವುದರ ಜೊತೆಗೆ ಎರೆಹುಳು ಗೊಬ್ಬರ ಘಟಕ ಮತ್ತು ಬಯೋಡೈಗ್ನೋಸ್ಟಿಕ್ ಘಟಕಗಳಿಗೆ ಸಹಾಯಧನ ನೀಡಲಾಗುತ್ತದೆ.
ಪ್ರಧಾನಮಂತ್ರಿ ಕಿಸಾನ್ ಮಾನ್ ಧನ ಯೋಜನೆ : ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ 18 - 40 ವರ್ಷದೊಳಗಿನ ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ವ್ಯಾಪ್ತಿಯ ನಾಗರಿಕ ಸೇವಾ ಕೇಂದ್ರಗಳಲ್ಲಿ ಈ ಯೋಜನೆಗೆ ನೋಂದಾಯಿಸಬಹುದು. ಆಸಕ್ತ ರೈತರರು ಮಾಸಿಕ ಪಿಂಚಣಿ ವಂತಿಕೆ ಪಾವತಿಸಿ 60 ವರ್ಷ ತುಂಬಿದ ನಂತರ ಪಿಂಚಣಿ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.
ಈ ಯೋಜನೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಾದರೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.
ಪ್ರಕೃತಿ ವಿಕೋಪ ಮತ್ತು ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯದೆ ನಷ್ಟ ಅನುಭವಿಸಿ ಸರ್ಕಾರಿ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಸಾಲ ನೀಡಿದ ಸಂಸ್ಥೆಗಳಿಂದ ಪಡೆದ ಸಾಲವನ್ನು ತಿರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡರೆ ಮೃತನ ಕುಟುಂಬಕ್ಕೆ ಒಂದು ಲಕ್ಷ ರೂ. ಸಹಯ ಧನ ಒದಗಿಸಲಾಗುತ್ತದೆ.
ಅದೇ ರೀತಿ ಕೃಷಿ ಸಂಬಂಧಿತ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮರಣ ಹೊಂದಿದ ರೈತರು ಹಾಗೂ ಕೃಷಿ ಕಾರ್ಮಿಕರ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಹಾಗೂ ಬೆಂಕಿ ಆಕಸ್ಮಿಕಗಳಿಂದ ಹುಲ್ಲು ಮೆದೆ/ಬಣವೆಗಳ ನಷ್ಟದಲ್ಲಿ 10 ಸಾವಿರ ರೂ. ಪರಿಹಾರ ದೊರೆಯುತ್ತದೆ. ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗಳಿಗೆ ಸಂಪರ್ಕಿಸಿ ಮತ್ತಷ್ಟು ಮಾಹಿತಿ ಪಡೆದುಕೊಂಡು ರೈತರು ತಮ್ಮ ಜೀವನ ಉತ್ತಮಪಡಿಸಿಕೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿ: ಶ್ರೀರಾಮುಲು ಕಾಲಿಗೆ ಗಾಯ.. ಉದ್ಘಾಟನೆ ಮುಗಿಯೊವರೆಗೂ ಕುಂಟುತ್ತಲೇ ನಡೆದ ಸಚಿವ